ಪಡುಬಿದ್ರೆ | ಸಮುದ್ರದಲ್ಲಿ ಮಗುಚಿ ಬಿದ್ದ ದೋಣಿ: ಮೀನುಗಾರ ಮೃತ್ಯು
Update: 2023-02-25 11:57 IST
ಪಡುಬಿದ್ರೆ, ಫೆ.25: ಹೆಜಮಾಡಿ ಕೋಡಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ದೋಣಿಯೊಂದು ಮಗುಚಿಬಿದ್ದ ಪರಿಣಾಮ ಮೀನುಗಾರನೋರ್ವ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಹೆಜಮಾಡಿಕೋಡಿ ನಿವಾಸಿ ಪದ್ಮನಾಭ ಸುವರ್ಣ(47) ಎಂದು ಗುರುತಿಸಲಾಗಿದೆ.
ಇವರು ಶುಕ್ರವಾರ ಮುಂಜಾನೆ ಧೀರೇಶ್ ಬಂಗೇರ ಎಂಬವರ ಜೊತೆ ನಾಡದೋಣಿಯಲ್ಲಿ ಮೀನುಗಾರಿಕೆಗೆ ಹೊರಟಿದ್ದರು. ಅಳಿವೆಬಾಗಿಲಿನಲ್ಲಿ ದೊಡ್ಡ ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿದ ಇವರ ದೋಣಿ ಮುಗುಚಿ ಬಿದ್ದಿದೆ. ಈ ವೇಳೆ ಸಮುದ್ರಕ್ಕೆ ಬಿದ್ದ ಪದ್ಮನಾಭ ಸುವರ್ಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಧೀರೇಶ್ ಬಂಗೇರ ಈಜಿ ದಡ ಸೇರಿದ್ದಾರೆ. ಪದ್ಮನಾಭ ಸುವರ್ಣ ಮೃತದೇಹವು ಹೆಜಮಾಡಿಕೋಡಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.