2020ರ ದಿಲ್ಲಿ ಕೋಮು ಗಲಭೆ: ನಾಲ್ವರ ದೋಷಮುಕ್ತಿ; ಆರೋಪಗಳು ಸಂಶಯಾತೀತವಾಗಿ ಸಾಬೀತಾಗಿಲ್ಲ ಎಂದ ನ್ಯಾಯಾಲಯ

Update: 2023-02-25 14:53 GMT

ಹೊಸದಿಲ್ಲಿ, ಫೆ. 25: ದಿಲ್ಲಿಯ ನ್ಯಾಯಾಲಯವೊಂದು 2020ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಕೋಮುಗಲಭೆಗಳಿಗೆ ಸಂಬಂಧಿಸಿದ ಪ್ರಕರಣವೊಂದರ ನಾಲ್ವರು ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.

ದಿನೇಶ್ ಯಾದವ್, ಸಾಹಿಲ್, ಸಂದೀಪ್ ಮತ್ತು ಟಿಂಕು ದೋಷಮುಕ್ತಗೊಂಡವರು. 2020ರ ಫೆಬ್ರವರಿ 25ರಂದು ನಗರದ ಭಾಗೀರಥಿ ವಿಹಾರ್ ಪ್ರದೇಶದಲ್ಲಿರುವ ಅಂಗಡಿಗಳಲ್ಲಿ ದಾಂಧಲೆ ನಡೆಸಿ ಬೆಂಕಿ ಕೊಟ್ಟ ಆರೋಪವನ್ನು ಅವರು ಎದುರಿಸುತ್ತಿದ್ದಾರೆ.
2020 ಫೆಬ್ರವರಿ 23 ಮತ್ತು 26ರ ನಡುವೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವವರು ಮತ್ತು ಅದನ್ನು ವಿರೋಧಿಸುವವರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಗಲಭೆ ಸ್ಫೋಟಗೊಂಡಿತ್ತು. ಹಿಂಸಾಚಾರದಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನವರು ಮುಸ್ಲಿಮರು.

ಆರೋಪಿಗಳು ಸಂಶಯದ ಲಾಭ ಪಡೆಯಲು ಅರ್ಹರಾಗಿದ್ದಾರೆ ಎಂದು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ತನ್ನ ಆದೇಶದಲ್ಲಿ ಹೇಳಿದರು. ‘‘ಈ ಪ್ರಕರಣದಲ್ಲಿ, ಆರೋಪಿಗಳ ವಿರುದ್ಧ ಹೊರಿಸಲಾಗಿರುವ ಆರೋಪಗಳು ಸಂಶಯಾತೀತವಾಗಿ ಸಾಬೀತಾಗಿಲ್ಲ ಎನ್ನುವುದು ನನ್ನ ಅಭಿಪ್ರಾಯ’’ ಎಂದು ನ್ಯಾಯಾಧೀಶರು ಹೇಳಿದರು.

ಎರಡು ಅಂಗಡಿಗಳಲ್ಲಿ ಅಕ್ರಮ ಕೂಟ ಸೇರಿರುವುದು, ಗಲಭೆ ಮತ್ತು ದಾಂಧಲೆ ನಡೆಸಿರುವ ಆರೋಪಗಳು ಸಂಪೂರ್ಣವಾಗಿ ಸಾಬೀತಾಗಿದೆಯಾದರೂ, ಆ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿಲ್ಲ ಎಂದು ನ್ಯಾಯಾಲಯ ಬೆಟ್ಟು ಮಾಡಿತು. ಪ್ರಾಸಿಕ್ಯೂಶನ್ನ ಏಳು ಸಾಕ್ಷಿಗಳಿಗೆ ಯಾವುದೇ ಆರೋಪಿಯನ್ನು ಮುಖ ನೋಡಿಯಾಗಲಿ, ಹೆಸರಿನಿಂದಾಗಲಿ ಗುರುತಿಸಲು ಸಾಧ್ಯವಾಗಿಲ್ಲ, ಯಾಕೆಂದರೆ ಅವರು ಆರೋಪಿಗಳ ಮುಖಗಳನ್ನೇ ನೋಡಿರಲಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಗಲಭೆಯನ್ನು ನಡೆಸಿದ ಗುಂಪಿನಲ್ಲಿ ಆರೋಪಿಗಳಿದ್ದರು ಎನ್ನುವುದನ್ನು ನಿರ್ಧರಿಸುವಾಗ, ಪೊಲೀಸ್ ಅಧಿಕಾರಿಗಳ ಹೇಳಿಕೆಗಳನ್ನು ‘ವಿಶ್ವಾಸಾರ್ಹ’ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

‘‘ಆರೋಪಿಗಳು ಸರಿಯಾದ ಮಾಹಿತಿ ನೀಡಿದ್ದರೂ ಪೊಲೀಸರು ದಾಖಲೆ ಸಂಗ್ರಹಿಸಲಿಲ್ಲ’’

‘‘ಇಬ್ಬರು ಸಾಕ್ಷಿಗಳು ಪೊಲೀಸ್ ಠಾಣೆಯಲ್ಲಿ ಮಹತ್ವದ ಮಾಹಿತಿಗಳನ್ನು ನೀಡಿದ್ದರೂ, ಅವುಗಳಿಗೆ ದಾಖಲೆಗಳನ್ನು ಒದಗಿಸಲು ಪ್ರಾಸಿಕ್ಯೂಶನ್ಗೆ ಸಾಧ್ಯವಾಗಲಿಲ್ಲ. ಕನಿಷ್ಠ ಅವರು ಆರೋಪಿಗಳ ಹೇಳಿಕೆಗಳನ್ನು ಬರಹದಲ್ಲಿ ಆದರೂ ಸಂಗ್ರಹಿಸಿಡಬೇಕಾಗಿತ್ತು’’ ಎಂದು ನ್ಯಾಯಾಲಯ ಹೇಳಿತು. ‘‘ಗಲಭೆಗಳು ನಡೆದ ತುಂಬಾ ಸಮಯದ ಬಳಿಕ ಆರೋಪಿಗಳನ್ನು ಬಂಧಿಸಲಾಯಿತು ಹಾಗೂ ಸುದೀರ್ಘ ವಿಳಂಬದ ಬಳಿಕ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಯಿತು’’ ಎಂದು ಅದು ಹೇಳಿತು.

Similar News