ಪಂಪ ರಾಜಕೀಯವಾಗಿ, ಸಾಮಾಜಿಕವಾಗಿ ಇಂದಿಗೂ ಪ್ರಸ್ತುತ ಕವಿ: ಪ್ರೊ.ಬಿ.ಎ.ವಿವೇಕ ರೈ
ಉಡುಪಿ: ಪಂಪನು ಹತ್ತನೆಯ ಶತಮಾನದ ಕವಿಯಾದರೂ ಆತನ ಕಾವ್ಯದಲ್ಲಿರುವ ಅಂಶಗಳು ಇವತ್ತಿಗೂ ಅನ್ವಯಗೊಳ್ಳುವ ಹಾಗೆ ಇವೆ. ಹೀಗಾಗಿ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಇಂದಿಗೂ ಪಂಪ ಬಹಳ ಮುಖ್ಯ ಕವಿಯೆನಿಸಿಕೊಳ್ಳುತ್ತಾನೆ. ಅವನ ಕಾವ್ಯದಲ್ಲಿ ಬರುವ ಲೌಕಿಕದ ಕಲ್ಪನೆ ಆ ಕಾವ್ಯವನ್ನು ಸಾರ್ವಕಾಲೀಕವಾಗಿ ಪ್ರಸ್ತುತವಾಗಿಸುತ್ತದೆ ಎಂದು ನಿವೃತ್ತ ಕುಲಪತಿ, ತುಳು ವಿದ್ವಾಂಸ ಹಾಗೂ ಸಾಹಿತಿ ಪ್ರೊ.ಬಿ.ಎ. ವಿವೇಕ ರೈ ಹೇಳಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಭಾಷಾ ವಿಭಾಗ ಮತ್ತು ಕನ್ನಡ ಮತ್ತು ಪ್ರಾದೇಶಿಕ ಭಾಷಾ ವಿಭಾಗಗಳ ವತಿಯಿಂದ ಅಂತಾ ರಾಷ್ಟ್ರೀಯ ಮಾತೃಭಾಷಾ ದಿನದ ಸಂದರ್ಭದಲ್ಲಿ ಆಯೋಜಿಸಲಾದ ‘ಪಂಪ ಭಾರತದಲ್ಲಿ ಲೌಕಿಕದ ಪರಿಕಲ್ಪನೆ’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಹಳೆಗನ್ನಡ ಸಾಹಿತ್ಯ ಎಂದ ಕೂಡಲೇ ಈ ಕಾಲಕ್ಕೆ ಸಂಬಂಧಪಟ್ಟದ್ದಲ್ಲ ಎಂಬ ಭಾವನೆ ಹೆಚ್ಚಿನವರಲ್ಲಿದೆ. ಆದರೆ, ಹಳಗನ್ನಡ ಸಾಹಿತ್ಯ ಹಳೆಯದಾದರೂ ಆಯಾ ಕಾಲಕ್ಕೆ ಸ್ಪಂದಿಸುತ್ತ ಹೊಸ ಸಂಗತಿಗಳನ್ನು ಅನಾವರಣ ಗೊಳಿಸುತ್ತಿರುತ್ತದೆ. ಇದಕ್ಕೆ ಪಂಪಭಾರತವೇ ದೃಷ್ಟಾಂತ. ಅದರಲ್ಲಿ ಬರುವ ಎಷ್ಟೋ ಉಲ್ಲೇಖಗಳು ಸಮಕಾಲೀನ ಮೌಲ್ಯವನ್ನು ಹೊಂದಿವೆ ಎಂದು ಪ್ರೊ. ರೈ ವಿವರಿಸಿದರು.
ಜರ್ಮನಿಯ ವ್ಯೆತಸ್‌ಬರ್ಗ್ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಿದ ವಿಧಾನವನ್ನು ಕೂಡ ಅವರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.ಬಳಿಕ ಪ್ರೊ.ರೈ ವಿದ್ಯಾರ್ಥಿ ಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಹೆಯ ಪ್ರೊ ವೈಸ್ ಚಾನ್ಸಲರ್ ಪ್ರೊ.ಮಧು ವೀರರಾಘವನ್ ಮಾತನಾಡಿ, ವಿಶ್ವವಿದ್ಯಾನಿಲಯದ ಕಲ್ಪನೆ ಪೂರ್ಣಗೊಳ್ಳಬೇಕಾದರೆ ಅದರಲ್ಲಿ ಮಾನವಿಕ ಮತ್ತು ಸಮಾಜ ವಿಜ್ಞಾನದ ವಿಭಾಗಗಳು ಸಕ್ರಿಯವಾಗಿರುವುದು ಅಗತ್ಯ. ಪ್ರಸ್ತುತ ಮಾಹೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾಷಾ ವಿಭಾಗದಲ್ಲಿ ಕನ್ನಡ ವಿಭಾಗವೂ ಸೇರ್ಪಡೆ ಗೊಂಡಿರುವುದು ಅತ್ಯಂತ ಮಹತ್ತ್ವದ ಹೆಜ್ಜೆಯಾಗಿದೆ ಎಂದರು.
ಮಾಹೆಯ ಐರೋಪ್ಯ ವಿಭಾಗಗಳ ಮುಖ್ಯಸ್ಥೆ ಪ್ರೊ.ನೀತಾ ಇನಾಂದಾರ್ ಉಪಸ್ಥಿತರಿದ್ದರು. ಪ್ರೊ. ರಾಹುಲ್ ಪುಟ್ಟಿ ಮತ್ತು ಡಾ. ಪೃಥ್ವೀರಾಜ ಕವತ್ತಾರು ಕಾರ್ಯಕ್ರಮ ನಿರ್ವಹಿಸಿದರು. ಆದಿತ್ಯಾ ದಿವ್ಯಾಸಿಂಗ್ ವಂದಿಸಿದರು.
ಬಹುಭಾಷಿಕತೆಗೆ ಒತ್ತು ನೀಡುವ ಯುನೆಸ್ಕೋದ ಆಶಯಕ್ಕನುಗುಣವಾಗಿ ಮೂರು ದಿನಗಳ ಕಾಲ ಜರಗಿದ ಕಾರ್ಯಕ್ರಮದಲ್ಲಿ ಸಾಹಿತ್ಯ-ಕಲೆಗಳ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಸಂಯೋಜಿಸಲಾಗಿತ್ತು. ಮೊದಲ ದಿನ ಅಸ್ಟ್ರೋಮೋಹನ್ ಅವರು ‘ಕನ್ನಡ ಶಾಲೆ’ ಎಂಬ ಶೀರ್ಷಿಕೆಯಲ್ಲಿ ಛಾಯಾಚಿತ್ರಗಳ ಪ್ರದರ್ಶನ ಮತ್ತು ಸಂವಾದವನ್ನು ಪ್ರಸ್ತುತಪಡಿಸಿದರು. ಎರಡನೆಯ ದಿನ ಜನಾರ್ದನ ಹಾವಂಜೆ ಕಾವಿಚಿತ್ರಗಳ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ನಡೆಸಿಕೊಟ್ಟರು.