ಯುವಜನೋತ್ಸವ: ಎಸ್‌ಡಿಎಂ ಮಂಗಳೂರಿಗೆ ಸಮಗ್ರ ಪ್ರಶಸ್ತಿ
ಉಡುಪಿ: ಕುಂಜಿಬೆಟ್ಟಿನಲ್ಲಿರುವ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಕರ್ನಾಟಕ ರಾಜ್ಯದ ಕಾನೂನು ವಿಶ್ವ ವಿದ್ಯಾಲಯ ಮಟ್ಟದ ಕಾನೂನು ಕಾಲೇಜುಗಳ ಯುವಜನೋತ್ಸವದಲ್ಲಿ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.
ಎರಡು ದಿನಗಳ ಕಾಲ ನಡೆದ ಯುವಜನೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗುರ್ಮೆ ಪ್ರತಿಷ್ಠಾನದ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಸಂಸ್ಕಾರದ ಕೊರತೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಲೋಪವಿದ್ದು ಇದನ್ನು ಸರಿಪಡಿಸಿ ಮಕ್ಕಳ ಬದುಕನ್ನು ರೂಪಿಸುವ ಹಾಗೂ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳುಚಿತ್ರ ರಂಗದ ಖ್ಯಾತ ಹಾಸ್ಯನಟ, ರಂಗಕರ್ಮಿ ಹಾಗೂ ಯಕ್ಷಗಾನ ಕಲಾವಿದ ಭೋಜರಾಜ ವಾಮಂಜೂರು ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಪಠ್ಯಕ್ರಮದ ಜೊತೆಗೆ ಕಲೆ ಹಾಗೂ ಕ್ರೀಡೆಗಳಲ್ಲೂ ಭಾಗವಹಿಸ ಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಘುನಾಥ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿರ್ದೇಶಕಿ ಡಾ.ನಿರ್ಮಲಾ ಕುಮಾರಿ, ಕೆರಾಡಿ ವರಸಿದ್ಧಿವಿನಾಯಕ ಕಾಲೇಜಿನ ನಿರ್ದೇಶಕ ಪ್ರದೀಪ್ ಟಿ.ಕೆ., ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರಕಾಶ್ ರಾವ್ ಹಾಗೂ ಸಾಂಸ್ಕೃತಿಕ ಕ್ಲಬ್‌ನ ಸಂಯೋಜಕಿ ಪ್ರೀತಿ ಹರೀಶ್‌ರಾಜ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕ್ಲೆಮೆಂಟಾ ಸ್ವಾಗತಿಸಿದರೆ, ಅಕ್ಷತಾ ವಂದಿಸಿ ಗಣೇಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.