ಕುಡಿಯುವ ನೀರು, ರಸ್ತೆ ದುರಸ್ಥಿಗೆ ಆಗ್ರಹ: ಸೋಣಿ ಪ್ರದೇಶದಲ್ಲಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಕುಂದಾಪುರ: ಹಲವು ವರ್ಷ ಕಳೆದರೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ರಸ್ತೆ ದುರಸ್ಥಿಯಾಗದ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಕೆಳಸೋಣಿ ಗ್ರಾಮಸ್ಥರು ಶಾಸಕರ ಮತ್ತು ಸಿದ್ದಾಪುರ ಗ್ರಾಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಸೋಣಿ ಪ್ರದೇಶದಲ್ಲಿ ಇರುವ ಸುಮಾರು 30 ಮನೆಗಳಲ್ಲಿ ಬಹುತೇಕ ಪರಿಶಿಷ್ಟ ಜಾತಿ-ಪಂಗಡದವರ ಮನೆಗಳಾಗಿವೆ. ರಸ್ತೆಗಳು ಅಭಿವೃದ್ಧಿ ಕಾಣದ ಹಿನ್ನೆಲೆಯಲ್ಲಿ ಪ್ರತಿ ಭಾರೀ ಮಳೆಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ರಸ್ತೆಗಳಲ್ಲಿ ಓಡಾಡಲು ಅಸಾಧ್ಯವಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನು ವಿರೋಧಿಸಿ ಗ್ರಾಮಸ್ಥರು ’ನಮಗೆ ಹಣ ಬೇಡ, ರಸ್ತೆ ಅಭಿವೃದ್ಧಿ ಮಾಡಿ’ ಎನ್ನುವ ಸ್ಲೋಗನ್ ಅಡಿ ಬ್ಯಾನರ್ ಅಳವಡಿಸಿದ್ದಾರೆ. ಇನ್ನೊಂದರಲ್ಲಿ ಉಡುಪಿ ಜಿಲ್ಲೆ ಬೈಂದೂರು ಕ್ಷೇತ್ರದ ಸಿದ್ದಾಪುರ ಗ್ರಾಮದ ಸೋಣಿ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮತ್ತು ರಸ್ತೆ ದುರಸ್ಥಿ ಕಾಣದೆ ಜನಪ್ರತಿನಿಧಿಗಳ ಮತ್ತು ಗ್ರಾ.ಪಂ. ಸಿದ್ದಾಪುರ ಇವರಿಂದ ಸಂಪೂರ್ಣ ನಿರ್ಲಕ್ಷಕ್ಕೋಳಪಟ್ಟಿರುತ್ತದೆ. ಇದರ ಅಭಿವೃದ್ಧಿ ಆಗುವವರೆಗೂ ಮುಂಬರುವ ಎಲ್ಲಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸುತ್ತೇವೆ. ರಸ್ತೆ ದುರಸ್ಥಿಯಾಗುವವರೆಗೆ ಯಾವುದೇ ರಾಜಿ ಸಂಧಾನಗಳಿಗೆ ಅವಕಾಶ ಇರುವುದಿಲ್ಲ. ನೊಂದ ಕೆಳಸೋಣಿ ಗ್ರಾಮಸ್ಥರು ಎಂದು ಬ್ಯಾನರ್ ಹಾಕಿದ್ದಾರೆ.
ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಸೋಣಿ ಎಂಬ ಪ್ರದೇಶವು ಕಾಡು ಪ್ರದೇಶಗಳನ್ನು ಒಳಗೊಂಡ ಪ್ರದೇಶವಾಗಿದೆ. ಇಲ್ಲಿ ಹೆಚ್ಚು ಎಸ್‌ಟಿ ಜನಾಂಗ ವಾಸವಾಗಿದ್ದರೂ, ಮೂಲಭೂತ ಸೌಕರ್ಯ ಮರಿಚಿಕೆಯಾಗಿವೆ. ಇಲ್ಲಿಯ ರಸ್ತೆಗಳು ಮಳೆ ನೀರಿಗೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಪಂಚಾಯತ್ ಇದರ ಬಗ್ಗೆ ಗಮನ ಹರಿಸದ ಪರಿಣಾಮ ಸಾರ್ವಜನಿಕರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಪರದಾಡುವಂತಾಗಿದೆ. ರೋಗಿಗಳನ್ನು ಮತ್ತು ಹಿರಿಯ ನಾಗರಿಕರನ್ನು ಕರೆದೊಯ್ಯಲು ರಸ್ತೆಗಳೇ ಇಲ್ಲ. ಚುನಾವಣೆ ಹತ್ತಿರವಾದಾಗ ಮತಯಾಚನೆಗೆ ಬರುವ ರಾಜಕಾರಣಿಗಳು ಗೆದ್ದ ಬಳಿಕ ಇಲ್ಲಿಯ ಜನರ ಸಮಸ್ಯೆಗೆ ಪರಿಹಾರ ನೀಡಿಲ್ಲ. ಹಲವು ಬಾರಿ ಸ್ಥಳೀಯಾಡಳಿತದಿಂದ ಶಾಸಕರ ತನಕ ಮನವಿ ನೀಡಿದರೂ ಸ್ಪಂದನೆಯಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.