×
Ad

ಉಡುಪಿ ನಗರಸಭೆಯಿಂದ 2.70 ಕೋಟಿ ರೂ. ಮಿಗತೆಯ ಬಜೆಟ್ ಮಂಡನೆ

Update: 2023-02-27 17:44 IST

ಉಡುಪಿ, ಫೆ.27: ಉಡುಪಿ ನಗರಸಭೆಯ 2023-24ನೆ ಸಾಲಿನ 2.70 ಕೋಟಿ ರೂ. ಮಿಗತೆಯ ಆಯವ್ಯಯ ಮುಂಗಡ ಪತ್ರವನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಸೋಮವಾರ ಮಂಡಿಸಿದರು.

ಈ ಬಾರಿಯ ಮುಂಗಡ ಪತ್ರದಲ್ಲಿ ಒಟ್ಟು 180.45 ಕೋಟಿ ರೂ. ಆದಾಯ (ಆರಂಭದ ಶಿಲ್ಕು 93.23 ಕೋಟಿ ರೂ. ಮತ್ತು ಒಟ್ಟು ಸ್ವೀಕೃತಿಗಳು 87.22 ಕೋಟಿ ರೂ.) ಹಾಗೂ 177.75 ಕೋಟಿ ರೂ. ಒಟ್ಟು ವೆಚ್ಚಗಳನ್ನು ತೋರಿಸಲಾಗಿದೆ.

ಆದಾಯಗಳ ಅಂದಾಜು

15ನೆ ಕೇಂದ್ರ ಹಣಕಾಸು ಆಯೋಗದ ಅನುದಾನ ಒಟ್ಟು 5.43 ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ಮುಕ್ತನಿಧಿ ಅನುದಾನ 2.64 ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ಸಿಬ್ಬಂದಿ ವೇತನ ಅನುದಾನ 6.20 ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ವಿದ್ಯುತ್ ಬಿಲ್ ಅನುದಾನ 7.42ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ 3.74ಕೋಟಿ, ಸ್ವಚ್ಛ ಭಾರತ್ ಮಿಷನ್ ಅನುದಾನ 3.91 ಕೋಟಿ ರೂ., ಗೃಹ ಭಾಗ್ಯ ಯೋಜನೆ 8 ಲಕ್ಷ ರೂ., ಪಾರಂಪರಿಕ ತ್ಯಾಜ್ಯ ನಿರ್ವಹಣೆ ಅನುದಾನ 3 ಕೋಟಿ ರೂ. ಆದಾಯ ಅಂದಾಜಿಸಲಾಗಿದೆ.

ಸಂಸತ್/ವಿಧಾನಸಭಾ ಸದಸ್ಯರ ಅನುದಾನ 5 ಲಕ್ಷ ಹಾಗೂ ಅದಿಭಾರ ಶುಲ್ಕ 30 ಲಕ್ಷವನ್ನು ಮತ್ತು ನಗರಸಭಾ ಆಸ್ತಿ ತೆರಿಗೆಯಿಂದ ಸರಾಸರಿ 18.20 ಕೋಟಿ ರೂ., ಉದ್ದಿಮೆ ಪರವಾನಿಗೆ ಶುಲ್ಕ 90 ಲಕ್ಷ ಮತ್ತು ಜಾಹೀರಾತು ಶುಲ್ಕ 20 ಲಕ್ಷ ರೂ., ಕಟ್ಟಡ ಪರವಾನಿಗೆ ಶುಲ್ಕ 40ಲಕ್ಷ ರೂ., ನೀರು ಸರಬರಾಜು ಶುಲ್ಕದಿಂದ 15ಕೋಟಿ ರೂ., ವಾಣಿಜ್ಯ ಸಂಕೀರ್ಣಗಳಿಂದ 2ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ.

ವೆಚ್ಚಗಳ ಅಂದಾಜು

ಕಚೇರಿಯ ಆಡಳಿತಾತ್ಮಕ ವೆಚ್ಚಗಳಿಗೆ 1.93ಕೋಟಿ, ಲೋಕೋಪಯೋಗಿ ಕಾಮಗಾರಿಗಳಿಗೆ ನಗರಸಭಾ ನಿಧಿಯಿಂದ 5.25 ಕೋಟಿ, ರಸ್ತೆ ಕಾಮಗಾರಿಗಳಿಗೆ 23 ಕೋಟಿ ರೂ., ದಾರಿದೀಪಗಳ ದುರಸ್ತಿ ಹಾಗೂ ನಿರ್ವಹಣೆಗೆ 4.33 ಕೋಟಿ, ನೀರು ಸರಬರಾಜಿಗೆ ಸಂಬಂಧಿಸಿ 10.71ಕೋಟಿ ರೂ., ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ 24.08 ಕೋಟಿ ರೂ., ಒಳಚರಂಡಿ ಯೋಜನೆಗಳಿಗೆ 9.62 ಕೋಟಿ ರೂ. ನಿಗದಿಪಡಿಸಲಾಗಿದೆ.

ಉದ್ಯಾನವನಗಳ ದುರಸ್ತಿ ಮತ್ತು ನಿರ್ವಹಣೆಗೆ 55 ಲಕ್ಷ ರೂ. ಹಾಗೂ ಹೊಸ ಉದ್ಯಾನವನಗಳಿಗೆ 2.16ಕೋಟಿ ರೂ., ಸ್ಮಶಾನಗಳ ಅಭಿವೃದ್ಧಿಗಾಗಿ 10ಲಕ್ಷ ರೂ., ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿ ನಿಧಿ 1.59ಕೋಟಿ ರೂ., ವಿಕಲಚೇತನರ ಕಲ್ಯಾಣ ನಿಧಿ 33.2 ಲಕ್ಷ ರೂ., ಬಡ ಜನರ ಕಲ್ಯಾಣ ನಿಧಿಗೆ 43.57 ಲಕ್ಷ ರೂ.ವನ್ನು ಕಾದಿರಿಸಲಾಗಿದೆ.

ಪೌರಕಾರ್ಮಿಕರಿಗೆ ಯೋಜನೆ

ಪೌರಕಾರ್ಮಿಕರಿಗೆ ನಗರದ ಮೂರು ಕಡೆಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣ ಹಾಗೂ ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ, ಸಹಾಯಧನ, ಪರಿಕರಗಳ ಖರೀದಿಗೆ 1.63ಕೋಟಿ ರೂ. ಮೀಸಲಿರಿಸಲಾಗಿದೆ. ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಲ್ಲಿ ಈಗಾಗಲೇ 6 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿದ್ದು, 2 ಮನೆಗಳ ನಿರ್ಮಾಣಕ್ಕಾಗಿ ಕಾರ್ಯಾದೇಶ ನೀಡಲಾಗಿದೆ.

20 ಸಾವಿರ ಬೀದಿದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಖಾಸಗಿ ಸಹಭಾಗಿತ್ವದಲ್ಲಿ ಬದಲಾಯಿಸುವ ಪ್ರಸ್ತಾವನೆ ಸರಕಾರದಿಂದ ಅನುಮೋದನೆಗೊಂಡಿದ್ದು, ಟೆಂಡರ್ ಕರೆದು ಕಾಮಗಾರಿ ನಿರ್ವಹಿಸಲಾಗುವುದು. ಕ್ರೀಡೆಗಳನ್ನು ಉತ್ತೇಜಿ ಸಲು 4ಲಕ್ಷ ರೂ. ಮೀಸಲಿಡಲಾಗಿದೆ. ಮಳೆ ನೀರು ಹರಿಯು ತೋಡುಗಳು, ತಡೆಗೋಡೆ, ಸಣ್ಣ ಸೇತುವೆಗಳ ನಿರ್ಮಾಣ ಹಾಗೂ ದುರಸ್ಥಿಗಳಿಗಾಗಿ 2.20 ಕೋಟಿ ರೂ. ಕಾದಿರಿಸಲಾಗಿದೆ.

ತ್ಯಾಜ್ಯ ವಿಲೇವಾರಿಗೆ ಯೋಜನೆ

ಪಾರಂಪರಿಕ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಉದ್ದೇಶಿಸಿದ್ದು 17ಕೋಟಿ ರೂ. ವೆಚ್ಚದ ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಿ ಅನುಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗಿದೆ.

ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕೈ ಚೀಲಗಳನ್ನು ನಿಷೇಧಿಸಲಾಗಿದ್ದು, ಬಳಕೆ ಮಾಡಿ ದ್ದಲ್ಲಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗುವುದು. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವೃತ್ತಗಳು ಹಾಗೂ ತಂಗುದಾಣ ಸಾರ್ವಜನಿಕ ಸಹಭಾಗಿತ್ವ ದೊಂದಿಗೆ ನಿರ್ಮಿಸಲು ಉದ್ದೇಶಿಸಲಾಗಿದೆ.

ಮನೆ ಮನೆ ತ್ಯಾಜ್ಯ ಸಂಗ್ರಹಣೆ ಮಾಡಲು ಎಲೆಕ್ಟ್ರಿಕ್ ಚಾಲಿತ ವಾಹನಗಳನ್ನು ಪ್ರಾಯೋಗಿಕವಾಗಿ ಉಪಯೋಗಿಸುವ ಸಲುವಾಗಿ ವಾಹನಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ. ನಗರಸಭೆ ಕಚೇರಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಳೆ ತಾಲೂಕು ಆಫೀಸ್ ಕಟ್ಟಡದ 45 ಕೋಟಿ ರೂ.ಗಳ ಅಂದಾಜು ಪಟ್ಟಿ ತಯಾರಿಸಿ  ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಅನುಮೋದನೆ ಹಂತದಲ್ಲಿರುತ್ತದೆ ಎಂದು ಸಮಿತ್ರಾ ಆರ್.ನಾಯಕ್ ತಮ್ಮ ಬಜೆಟ್‌ನಲ್ಲಿ ಮಂಡಿಸಿದರು.

ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು ಉಪಸ್ಥಿತರಿದ್ದರು.

ಎಸ್‌ಟಿಪಿ ಪುನಶ್ಚೇತನಕ್ಕೆ 17.50 ಕೋಟಿ ರೂ. ಪ್ರಸ್ತಾವನೆ

ನಿಟ್ಟೂರಿನ ಕೊಳಚೆ ನೀರಿನ ಶುದ್ಧೀಕರಣ ಘಟಕವನ್ನು ಪುನಶ್ಛೇತನಗೊಳಿಸಲು 17.50 ಕೋಟಿ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಎಸ್‌ಟಿಪಿ ಘಟಕದ ಲಗೂನ್‌ನಲ್ಲಿರುವ ಸ್ಲಡ್ಜ್‌ನ್ನು ತೆರವುಗೊಳಿಸಲು 1ಕೋಟಿ ರೂ. ಮೀಸಲಿಡಲಾಗಿದೆ.

ಒಳಚರಂಡಿ ಜಾಲ ವಿಸ್ತರಣೆ ಮತ್ತು ಯಂತ್ರೋಪಕರಣಗಳ ಖರೀದಿಗಾಗಿ 5ಕೋಟಿ ರೂ. ಮೀಸಲಿಡಲಾಗಿದೆ. ಸಂತೆಕಟ್ಟೆಯ ವಾರದ ಸಂತೆ ನಡೆಯುತ್ತಿದ್ದ 68 ಸೆಂಟ್ಸ್ ಜಾಗದಲ್ಲಿ ಮತ್ತು ವಿಶ್ವೇಶ್ವರಯ್ಯ ಮಾರುಕಟ್ಟೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ತ್ಯಾಜ್ಯ ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸ್ವಚ್ಛ ಗೃಹ ಕಲಿಕಾ ಕೇಂದ್ರ ಸ್ಥಾಪಿಸಲು 30ಲಕ್ಷ ರೂ. ಮೀಸಲಿಡ ಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

Similar News