×
Ad

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ: ಅಣ್ಣಾಮಲೈ

Update: 2023-02-27 18:14 IST

ಉಡುಪಿ, ಫೆ.27: ಕರ್ನಾಟಕದಲ್ಲಿ ಆಡಳಿತ ಪರ ಅಲೆ ಇದೆಯೇ ಹೊರತು ಆಡಳಿತ ವಿರೋಧಿ ಅಲೆ ಇಲ್ಲ. ದಕ್ಷಿಣ ಭಾರತದಲ್ಲೇ ಕರ್ನಾಟಕ ಅಭಿವೃದ್ಧಿಯ ರಾಜ್ಯವಾಗಿ ಹೊರಹೊಮ್ಮಿದೆ. ಅತಿ ಹೆಚ್ಚು ಹೂಡಿಕೆಯೇ ನಮ್ಮ ಡಬಲ್ ಇಂಜಿನ್ ಸರಕಾರದ ಸಾಧನೆಯಾಗಿದೆ ಎಂದು ಕರ್ನಾಟಕ ವಿಧಾನಸಭಾ ಚುನಾವಣೆಯ ರಾಜ್ಯ ಸಹ ಉಸ್ತುವಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಕೇಂದ್ರ ನಾಯಕರ ಸರಣಿ ಭೇಟಿಯ ಕುರಿತು ಸಿದ್ದರಾಮಯ್ಯ ಮತ್ತು ಡಿಕೆಶಿ ಕಾಂಗ್ರೆಸ್ ಮಾನಸಿಕತೆಯಲ್ಲಿ ಆರೋಪ ಮಾಡುತ್ತಿದ್ದಾರೆ.  ತಮಿಳುನಾಡಿ ನಲ್ಲಿ ಚುನಾವಣೆ ಸಂದರ್ಭ ಅಧಿಕಾರ ಇಲ್ಲದಿದ್ದರೂ 43 ಕೇಂದ್ರ ಸಚಿವರು ಬಂದಿದ್ದಾರೆ. ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ನಲ್ಲಿ ನಾಯಕರು ಕಾಣಿಸಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಚುನಾವಣೆ ಇದ್ದರೂ ಇಲ್ಲದಿದ್ದರೂ ನಮ್ಮ ನಾಯಕರು ಬಂದೇ ಬರುತ್ತಾರೆ ಎಂದರು.

ಕಾಂಗ್ರೆಸ್‌ನ ನಾಯಕರು ಖಿನ್ನತೆಯಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಿವೃತ್ತಿ ಎಂಬುದೇ ಇಲ್ಲ. ಒಂದು ಕುಟುಂಬದ ಕೈಕೆಳಗೆ ಕಾಂಗ್ರೆಸ್ ಇದೆ. ಕರ್ಮವೀರ ಕಾಮರಾಜರ ಫೋಟೋವನ್ನು ಕೈ ಬಿಟ್ಟಿದ್ದಾರೆ. ಈಗ ದೇಶದಲ್ಲಿರುವ ಕಾಂಗ್ರೆಸ್ ಒಂದು ಕುಟುಂಬದ ಪಕ್ಷವಾಗಿದೆ. ಕುಟುಂಬದ ಕಾಂಗ್ರೆಸ್‌ನಲ್ಲಿ ನಿವೃತ್ತಿ ಎಂಬುದು ಇರುವುದಿಲ್ಲ ಎಂದು ಅವರು ಟೀಕಿಸಿದರು.

ತಮಿಳುನಾಡಿನಲ್ಲಿ ಸೈನಿಕ ಹತ್ಯೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ನಾವು ಸದಾ ಕಾಲ ಸೈನಿಕರ ಜೊತೆಗೆ ಇರುತ್ತೇವೆ. ನಮ್ಮ ಪಕ್ಷದ ವತಿಯಿಂದ 10 ಲಕ್ಷ ರೂ. ನೀಡುತ್ತೇವೆ ಮತ್ತು ಎರಡು ದಿನಗಳಲ್ಲಿ ಮೃತ ಸೈನಿಕನ ಮನೆಗೆ ಭೇಟಿ ನೀಡುತ್ತೇವೆ. ಡಿಎಂಕೆ ಸರಕಾರದಲ್ಲಿ ನೈತಿಕತೆ ಇಲ್ಲ. ಅವರು ಸೈನಿಕರಿಗೆ ಕನಿಷ್ಠ ಗೌರವ ನೀಡುತ್ತಿಲ್ಲ. ಅವರದೇ ಪಕ್ಷದ ಕೌನ್ಸಿಲರ್ ಹತ್ಯೆ ಮಾಡಿದರೂ ಮುಖ್ಯಮಂತ್ರಿಗಳಿಗೆ ಏನೂ ಅನಿಸಿಲ್ಲ ಎಂದರು.

ತಮಿಳುನಾಡು ರಾಜ್ಯ ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸಿದೆ. 1967ರವರೆಗೆ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಇತ್ತು. ಕಾಂಗ್ರೆಸ್ ಹಿಂದಿ ಭಾಷೆಯನ್ನು ಹೇರಿ ಅಧಿಕಾರ ಕಳೆದುಕೊಂಡಿತು. ಆಮೇಲೆ ದ್ರಾವಿಡಿಯನ್ ಪಕ್ಷಗಳು ಅಧಿಕಾರ ಪಡೆಯುತ್ತ ಬಂದಿದೆ. ರಾಷ್ಟ್ರೀಯ ಪಕ್ಷ ಹಾಗೂ ಮೋದಿ ಮೇಲೆ ತಮಿಳುನಾಡು ಜನರಿಗೆ ಮರ್ಯಾದೆ ಇದೆ ಎಂದು ಅವರು ತಿಳಿಸಿದರು.

‘ತಮಿಳುನಾಡಿನಲ್ಲಿ ಬಿಜೆಪಿ ಉತ್ತಮ ಬೆಳವಣಿಗೆ ಕಾಣುತ್ತಿದೆ. ದ್ರಾವಿಡಿಯನ್ ರಾಜಕೀಯ ಇರುವ ತಮಿಳುನಾಡಿನಲ್ಲಿ ತುಂಬಾ ರಾಜಕೀಯ ಪಕ್ಷಗಳಿವೆ. ಬೇರೆ ಬೇರೆ ಸಂದರ್ಭಗಳಲ್ಲಿ ನಾಲ್ಕು ಲೋಕಸಭೆ, 4 ವಿಧಾನಸಭಾ ಸದಸ್ಯರನ್ನು ನಾವು ಗೆದ್ದಿದ್ದೇವೆ. ಬಿಜೆಪಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. 2024ರಲ್ಲಿ ಗಣನೀಯ ಸಂಖ್ಯೆಯ ಲೋಕಸಭಾ ಸದಸ್ಯರು ಗೆಲ್ಲಲಿದ್ದಾರೆ. ನಮ್ಮ ಗ್ರೋಥ್ ಫೇಸ್ ಶೇ. 26ರಷ್ಟಿದೆ. ಹಿರಿಯರು, ಯುವಕರು ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ’
-ಅಣ್ಣಾಮಲೈ, ಬಿಜೆಪಿ ರಾಜ್ಯಾಧ್ಯಕ್ಷರು, ತಮಿಳುನಾಡು

Similar News