×
Ad

​ಇಸ್ರೇಲಿ ವಸಾಹತುಗಾರರ ದಾಂಧಲೆ; ಫೆಲೆಸ್ತೀನೀಯರ ಮನೆ, ಕಾರುಗಳಿಗೆ ಬೆಂಕಿ‌

Update: 2023-02-27 23:51 IST

ಜೆರುಸಲೇಂ, ಫೆ.27: ಆಕ್ರಮಿತ ಪಶ್ಚಿಮದಂಡೆಯ ನಬ್ಲೂಸ್ನ ಹುವಾರ ಪಟ್ಟಣದಲ್ಲಿ ಇಸ್ರೇಲಿ ವಸಾಹತುಗಾರರು ದಾಂಧಲೆ ನಡೆಸಿ ಫೆಲೆಸ್ತೀನೀಯರ ಮನೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿರುವುದಾಗಿ ವರದಿಯಾಗಿದೆ.

ರವಿವಾರ ತಡರಾತ್ರಿ ವಸಾಹತುಗಾರರು ನಡೆಸಿರುವ ಅತ್ಯಂತ ಭೀಕರ ಹಿಂಸಾಚಾರದಲ್ಲಿ 30 ಮನೆಗಳು ಹಾಗೂ ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಇದೇ ಸಂದರ್ಭ ಇಸ್ರೇಲ್ ಸೇನೆಯ ಗುಂಡೇಟಿನಿಂದ  37 ವರ್ಷದ ಫೆಲೆಸ್ತೀನ್ ಪ್ರಜೆಯೊಬ್ಬ ಮೃತಪಟ್ಟಿರುವುದಾಗಿ ಫೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ. ದಾಂಧಲೆಯ ಸಂದರ್ಭ ಇಬ್ಬರು   ಗುಂಡೇಟಿನಿಂದ ಗಾಯಗೊಂಡರೆ, ಒಬ್ಬ ವ್ಯಕ್ತಿಗೆ ಇರಿಯಲಾಗಿದೆ. ಮತ್ತೊಬ್ಬ ವ್ಯಕ್ತಿಗೆ ಕಬ್ಬಿಣದ ರಾಡ್ನಿಂದ ಥಳಿಸಲಾಗಿದ್ದು ತೀವ್ರ ಗಾಯಗೊಂಡಿದ್ದಾನೆ. ಭದ್ರತಾ ಪಡೆ ಸಿಡಿಸಿದ ಅಶ್ರುವಾಯುವಿನಿಂದ ಸುಮಾರು 95 ಜನ ಅಸ್ವಸ್ಥಗೊಂಡಿದ್ದಾರೆ ಎಂದು ಪೆಲೆಸ್ತೀನಿಯನ್ ರೆಡ್ಕ್ರೆಸೆಂಟ್ ವರದಿ ಮಾಡಿದೆ. 

ಈ ದಾಂಧಲೆ ಮತ್ತು ಹಿಂಸಾಚಾರದಲ್ಲಿ ಸುಮಾರು 400ರಷ್ಟು ಯೆಹೂದಿ ವಸಾಹತುಗಾರರು ಪಾಲ್ಗೊಂಡಿದ್ದರು ಎಂದು ನಬ್ಲೂಸ್ ಪ್ರದೇಶದಲ್ಲಿ ಇಸ್ರೇಲಿ ವಸಾಹತು ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸುವ ಫೆಲೆಸ್ತೀನಿಯನ್ ಅಧಿಕಾರಿ ಘಸಾನ್ ಡಗ್ಲಾಸ್ ಹೇಳಿದ್ದಾರೆ. ‘ಇದು ಆಕ್ರಮಣಕಾರ ಪಡೆಯ ರಕ್ಷಣೆಯಲ್ಲಿ ವಸಾಹತುಗಾರರು ನಡೆಸಿರುವ ಭಯೋತ್ಪಾದಕ ಕೃತ್ಯವಾಗಿದೆ. ಇದಕ್ಕೆ ಇಸ್ರೇಲ್ ಸರಕಾರ ಸಂಪೂರ್ಣ ಹೊಣೆಯಾಗಿದೆ’ ಎಂದು ಫೆಲೆಸ್ತೀನಿಯನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಖಂಡಿಸಿದ್ದಾರೆ.ಶಾಂತರಾಗಿರುವಂತೆ ಮನವಿ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಥನ್ಯಾಹು, ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ. ಹುವಾರಾದಲ್ಲಿನ ಹಿಂಸಾಚಾರದಿಂದ ಆಘಾತವಾಗಿದೆ. ಈ ಅಂತ್ಯವಿಲ್ಲದ ಹಿಂಸಾಚಾರವನ್ನು ತಪ್ಪಿಸಲು ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಯುರೋಪಿಯನ್ ಯೂನಿಯನ್ ಆಗ್ರಹಿಸಿದೆ.

Similar News