550 ಗಂಟೆ ಯಶಸ್ವಿಯಾಗಿ ವಿಮಾನ ಹಾರಿಸಿದ ಹಿಜಾಬ್ ಧಾರಿ ಸಯೀದಾ ಸಲ್ವಾ ಫಾತಿಮಾ
ಹಳೆ ಹೈದರಾಬಾದ್ ನಲ್ಲಿ ಶಿಕ್ಷಣಕ್ಕಾಗಿ ಹೋರಾಟದಿಂದ ಏರ್‌ಬಸ್-320 ಹಾರಾಟದ ವರೆಗಿನ ಯಶೋಗಾಥೆ
ಹೈದರಾಬಾದ್: ಕೆಲ ತಿಂಗಳ ಹಿಂದೆ ಹಿಜಾಬ್ ಧರಿಸಿ ಶಾಲೆಗೆ ಹಾಜರಾಗುವುದು ದೇಶಾದ್ಯಂತ ವಿವಾದದ ಸ್ವರೂಪ ಪಡೆದಿತ್ತು. ಆದರೆ, ಇಲ್ಲೊಬ್ಬ ಹಿಜಾಬ್‌ಧಾರಿ ಮಹಿಳೆಯು ಎರಡು ಸೀಟುಗಳ ಸೆಸ್ನಾದಿಂದ ಪ್ರಾರಂಭಿಸಿ, ಇದೀಗ ಏರ್‌ಬಸ್-320 ವಿಮಾನವನ್ನು 550 ಗಂಟೆಗಳ ಕಾಲ ಯಶಸ್ವಿಯಾಗಿ ಹಾರಿಸಿರುವ ಸಾಧನೆ ಹೈದರಾಬಾದ್‌ನಿಂದ ವರದಿಯಾಗಿದೆ. 2015-16ರಲ್ಲೇ ಸಲ್ವಾ ಪೈಲಟ್ ಆಗಿ ಆಯ್ಕೆಯಾಗಿದ್ದರು.
34 ವರ್ಷದ ಸೈಯೀದಾ ಸಲ್ವಾ ಫಾತಿಮಾರ ಈ ಸಾಧನೆ ಸುಲಭ ಸಾಧ್ಯವೇನೂ ಆಗಿರಲಿಲ್ಲ. ಹಳೆಯ ಹೈದರಾಬಾದ್ ಮೂಲದ ಫಾತಿಮಾ ಈ ಹಾದಿಯಲ್ಲಿ ಹೋರಾಟ ನಡೆಸಿ, ಈಗ ಆಕಾಶವೇ ಮಿತಿ ಎಂಬಂತೆ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾರೆ ಎಂದು timesofindia.com ವರದಿ ಮಾಡಿದೆ.
ಹಳೆಯ ಹೈದರಾಬಾದ್‌ನಲ್ಲಿ ಜನಿಸಿದ ಫಾತಿಮಾ ಬೇಕರಿ ಉದ್ಯೋಗಿಯೊಬ್ಬರ ಮಗಳಾಗಿ ಕಡು ಬಡತನದಲ್ಲೇ ಬೆಳೆದು ಬಂದವರು. ಈಗಲೂ ಕೊಳಾಯಿ ನೀರು ಮರೀಚಿಕೆಯೇ ಆಗಿರುವ ಮೊಘಲ್‌ಪುರದ ನೆರೆ ಊರಿನವರಾದ ಫಾತಿಮಾರ ಕನಸಿಗೆ ಮಾತ್ರ ಯಾವುದೇ ಮಿತಿ ಇರಲಿಲ್ಲ. ಇಂತಹ ಫಾತಿಮಾ ವಾಣಿಜ್ಯ ವಿಮಾನಗಳ ಪೈಲಟ್ ಪರವಾನಗಿ ಹೊಂದಿರುವ ಕೆಲವೇ ಮುಸ್ಲಿಂ ಮಹಿಳೆಯರ ಪೈಕಿ ಒಬ್ಬರಾಗಿ ಹೊಮ್ಮಿದ್ದಾರೆ.
ಈ ಹಿಜಾಬ್‌ಧಾರಿ ಪೈಲಟ್ ಮಹಿಳೆಯು ತನ್ನ ಬಗ್ಗೆ ಅಚಲ ವಿಶ್ವಾಸ ಹೊಂದಿದ್ದರು ಮತ್ತು ಸಮಾಜದ ತೀವ್ರ ಸಾಂಪ್ರದಾಯಿಕತೆಗೆ ಹಿಂಜರಿಯಲು ನಿರಾಕರಿಸಿದರು ಅಥವಾ ಆರ್ಥಿಕ ಮುಗ್ಗಟ್ಟಿಗೆ ತಲೆ ಬಾಗಲಿಲ್ಲ. ಇಂತಹ ಫಾತಿಮಾರ ತಂದೆ ಸೈಯದ್ ಅಶ್ಫಾಕ್ ಅಹಮದ್ ತಮ್ಮ ಮಗಳನ್ನು ಪ್ರೀತಿಯಿಂದ "ಅದ್ಭುತ ಹುಡುಗಿ" ಎಂದು ಶ್ಲಾಘಿಸುತ್ತಾರೆ ಮತ್ತು ಆ ಮಾತಿನಲ್ಲಿ ಅರ್ಥವೂ ಇದೆ.
ಮಾಲಕ್‌ಪೇಟೆಯ ಐಝಾದ ನಿಯೊ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಶುಲ್ಕ ತೆರಲು ಸಾಧ್ಯವಾಗದೆ ಫಾತಿಮಾ ಶಾಲೆ ತೊರೆಯುವ ಹಂತದಲ್ಲಿದ್ದರು. ಆದರೆ, ಆ ಶಾಲೆಯ ಪ್ರಾಂಶುಪಾಲೆ ಅಲಿಫಾ ಹುಸೇನ್, ಆಕೆಯ ಪಾಲಿಗೆ ರಕ್ಷಕಿಯಾದರು ಮತ್ತು ಅತ್ಯಂತ ಪ್ರಮುಖವಾಗಿದ್ದ ಎರಡು ವರ್ಷಗಳ ವ್ಯಾಸಂಗಕ್ಕೆ ಹಣ ಒದಗಿಸಿದರು.
ಫಾತಿಮಾ ತನ್ನ ಪೋಷಕರಿಗೆ ಹಿರಿಯ ಮಗಳಾಗಿದ್ದು, ಸ್ಥಳೀಯ ಬೇಕರಿಯಲ್ಲಿ ಕಾರ್ಯನಿರ್ವಹಿಸುವ ಆಕೆಯ ತಂದೆಯ ಗಳಿಕೆ ತೀರಾ ಗೌಣವಾಗಿದೆ. ಫಾತಿಮಾ ಮೆಹ್ದಿಪಟ್ನಂನ ಸೇಂಟ್ ಆ್ಯನ್ಸ್ ಜೂನಿಯರ್ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ವ್ಯಾಸಂಗ ಮಾಡುವಾಗ ಮತ್ತೆ ಸಂಕಷ್ಟಕ್ಕೆ ತುತ್ತಾದರು. ಕಾಲೇಜಿನ ಶುಲ್ಕವನ್ನು ಭರಿಸಲಾಗದ ಆಕೆ ಮತ್ತೆ ಕಾಲೇಜು ತೊರೆಯುವ ಹಂತದಲ್ಲಿದ್ದರು.
ಶುಲ್ಕ ಪಾವತಿಸದ ಸರತಿಯಲ್ಲಿ ಬಿರುಬಿಸಿಲಿನಲ್ಲಿ ನಿಂತಿದ್ದ ಫಾತಿಮಾರನ್ನು ಸಸ್ಯಶಾಸ್ತ್ರ ಪ್ರಾಧ್ಯಾಪಕಿ ಸಂಗೀತಾ ಗಮನಿಸಿದರು ಮತ್ತು ಆಕೆಯ ಶುಲ್ಕ ಭರಿಸುವ ಹೊಣೆ ಹೊತ್ತುಕೊಂಡರು. ಈ ಕುರಿತು ಪ್ರತಿಕ್ರಿಯಿಸುವ ಫಾತಿಮಾ, "ಆಕೆ ದೇವರೇ ಕಳಿಸಿದ ಅಪದ್ಬಾಂಧವಿ. ನನಗೆ ಆ ಪ್ರಾಧ್ಯಾಪಕಿ ವೈಯಕ್ತಿಕವಾಗಿ ಪರಿಚಯವಿರಲಿಲ್ಲ ಅಥವಾ ಅವರು ನನಗೆ ಬೋಧಿಸಿಯೂ ಇರಲಿಲ್ಲ" ಎಂದು ಸ್ಮರಿಸುತ್ತಾರೆ.
ನಾನು ಕಠಿಣ ದುಡಿಮೆ ಮಾಡುತ್ತೇನೆ ಮತ್ತು ನಾನು ಎದುರಿಸಿದ ಸಂಕಷ್ಟಗಳನ್ನು ನನ್ನ ಮಕ್ಕಳು ಎದುರಿಸದಂತೆ ಖಾತ್ರಿಪಡಿಸಿಕೊಳ್ಳುತ್ತೇನೆ. ನಾನು ನನ್ನ ಹಳೆ ಹೈದರಾಬಾದ್ ಅನ್ನು ತೊರೆದು ಬಂಜಾರಾ ಅಥವಾ ಜ್ಯುಬಿಲಿ ಹಿಲ್ಸ್‌ಗೆ ಸ್ಥಳಾಂತರಗೊಳ್ಳುವುದಿಲ್ಲ ಎಂದು ದೃಢವಾಗಿ ಹೇಳುತ್ತಾರೆ ಫಾತಿಮಾ.