×
Ad

ಅನುದಾನ ಸಮರ್ಪಕ ಬಳಕೆಗೆ ಸಚಿವ ಬಿ.ವಿ. ಬಸವರಾಜ್ ಸೂಚನೆ

Update: 2023-02-28 19:27 IST

ಮಂಗಳೂರು, ಫೆ.28: ರಾಜ್ಯ ಸರಕಾರವು ಮಂಗಳೂರು ಮಹಾನಗರ ಪಾಲಿಕೆಗೆ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ನಿಗದಿತ ಕಾಲಮಿತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ನಗರಾಭಿವೃದ್ಧಿ ಸಚಿವ ಬಿ.ವಿ. ಬಸವರಾಜ್ (ಬೈರತಿ) ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಹೊರವಲಯದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

15ನೇ ಹಣಕಾಸು ಆಯೋಗ, ನಗರೋತ್ಥಾನ, ಮಹಾತ್ಮಾ ಗಾಂಧಿ ನಗರ ನೈರ್ಮಲ್ಯ ಯೋಜನೆ, ಎಸ್‌ಎಫ್‌ಸಿ ವಿಶೇಷ ಅನುದಾನಗಳು ಸಹಿತ ಹಲವು ಯೋಜನೆಗಳಡಿ ಸರಕಾರ ಬಿಡುಗಡೆ ಮಾಡುವ ಅನುದಾನವನ್ನು ಕಾಲಮಿತಿಯಲ್ಲಿ ಬಳಕೆಯಾಗಿ ಅರ್ಹ ಫಲಾನುಭವಿಗಳಿಗೆ ಅದರ ಸೌಲಭ್ಯ ದೊರಕಬೇಕು. ಯಾವುದೇ ಕಾರಣಕ್ಕೂ ಆ ಅನುದಾನ ಲ್ಯಾಪ್ಸ್ ಆಗದಂತೆ ಎಚ್ಚರ ವಹಿಸಬೇಕು, ಯಾವುದೇ ಕಾಮಗಾರಿಗಳು ಬಾಕಿ ಉಳಿಯಬಾರದು ಈ ದಿಸೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಚಿವ ಬಿ.ವಿ. ಬಸವರಾಜ್ (ಬೈರತಿ) ಹೇಳಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಯಾವುದೇ ಸಮಸ್ಯೆ ಎದುರಾಗಬಾರದು. ನಗರ ಸೌಂದರ್ಯೀಕರಣದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಸುರತ್ಕಲ್‌ನಲ್ಲಿ 82 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹಾಗೂ ಕದ್ರಿ ಹಾಗೂ ಕಂಕನಾಡಿಯಲ್ಲಿ ನಿರ್ಮಾಣಗೊಂಡಿರುವ ಮಾರುಕಟ್ಟೆಗಳನ್ನು ಮುಂದಿನ 10 ದಿನದೊಳಗೆ ಲೋಕಾರ್ಪಣೆಗೊಳಿಸಬೇಕು ಎಂದರು.

ಶಾಸಕ ರಾಜೇಶ್ ನಾಯಕ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚೆನ್ನಬಸಪ್ಪ, ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ್ ಪ್ರಭ, ಮುಡಾ ಆಯುಕ್ತ ಭಾಸ್ಕರ್, ಸ್ಮಾರ್ಟ್ ಸಿಟಿ ಲಿ. ಮತ್ತಿತರರು ಉಪಸ್ಥಿತರಿದ್ದರು.

Similar News