×
Ad

ಉಡುಪಿ ನಗರಕ್ಕೆ ಸ್ಮಾರ್ಟ್ ಎಲ್‌ಇಡಿ ದಾರಿದೀಪ ಅಳವಡಿಸುವ ಯೋಜನೆಗೆ ಅನುಮೋದನೆ

Update: 2023-03-01 20:30 IST

ಉಡುಪಿ, ಮಾ.1: ಉಡುಪಿ  ನಗರಸಭಾ ವ್ಯಾಪ್ತಿಯಲ್ಲಿ ಹಾಲಿ ಇರುವ ಹಳೆಯ ಮಾದರಿಯ ಬೀದಿ ದೀಪಗಳನ್ನು ಬದಲಾಯಿಸಿ ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಎಲ್‌ಇಡಿ ದೀಪಗಳನ್ನು ಅಳವಡಿಸುವ 24.25ಕೋಟಿ ರೂ. ಮೊತ್ತದ ಯೋಜನೆಗೆ ಪೌರಾಡಳಿತ ನಿರ್ದೇಶನಾಲಯ ಆಡಳಿತಾತ್ಮಕ ಅನುಮೋದನೆ ನೀಡಿದೆ.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ/ಮಹಾನಗರ ಪಾಲಿಕೆಗಳಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಿಸಿ ಕೇಂದ್ರೀಕೃತ ಚಾಲನೆ ಮತ್ತು ನಿರ್ವಹಣೆಯುಳ್ಳ ಇಂಧನ ಕ್ಷಮತೆಯ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುವ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿ ಯಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿರುತ್ತದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಈ ಯೋಜನೆಯ ಡಿಪಿಎಆರ್ ತಯಾರಿಸುವ ಸಂದರ್ಭದಲ್ಲಿ ಉಡುಪಿ ನಗರದ ಹೆಸರು ಬಿಟ್ಟು ಹೋಗಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಲಿ ಇರುವ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳ ನ್ನಾಗಿ ಬದಲಾಯಿಸುವ 24.25 ಕೋಟಿ ರೂ. ಮೊತ್ತದ ಯೋಜನೆ ಸಿದ್ಧಪಡಿಸಿ ಆಡಳಿತಾತ್ಮಕ ಅನು ಮೋದನೆ ನೀಡಲು ನಿರ್ದೇಶಕರು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸ ಲಾಗಿತ್ತು. ಶಾಸಕ ಕೆ.ರಘುಪತಿ ಭಟ್ ಸರಕಾರ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸಿದ ಫಲವಾಗಿ ಯೋಜನೆ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಈ ಯೋಜನೆ ಅನುಷ್ಠಾನ ಆಗುವುದರಿಂದ ಉಡುಪಿ ನಗರದ ಎಲ್ಲಾ ಹಳೆಯ ಮಾದರಿಯ ಟ್ಯೂಬ್ ಲೈಟ್‌ಗಳನ್ನು ಬದಲಾಯಿಸಿ ಹೊಸ ಮಾದರಿಯ ಸುಮಾರು 20ಸಾವಿರಕ್ಕೂ ಅಧಿಕ ಸ್ಮಾರ್ಟ್ ಎಲ್‌ಇಡಿ ದೀಪಗಳನ್ನು ಅಳವಡಿಸ ಲಾಗುವುದು. ಇದರಿಂದ ಪ್ರಸ್ತುತ ದಾರಿ ದೀಪಗಳಿಂದ ವ್ಯಯ ಆಗುತ್ತಿರುವ ವಿದ್ಯುತ್‌ನಲ್ಲಿ ಶೇ.80ರಷ್ಟು ವಿದ್ಯುತ್ ಉಳಿತಾಯವಾಗುವ ಜೊತೆಗೆ ನಗರ ಸಭೆ ಪಾವತಿಸುತ್ತಿರುವ ವಿದ್ಯುತ್ ಬಿಲ್ಲಿನಲ್ಲಿ ಶೇ.80ರಷ್ಟು ಉಳಿತಾಯವಾಗುತ್ತದೆ ಎಂದು ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಅಲ್ಲದೆ ಈಗಿರುವ ದಾರಿದೀಪಗಳ ನಿರ್ವಹಣೆಗೆ ಪ್ರತಿ ವರ್ಷ ನಗರಸಭೆಗೆ ನಿರ್ವಹಣಾ ವೆಚ್ಚ 1.20ಕೋಟಿ ರೂ. ವೆಚ್ಚವಾಗುತ್ತಿದ್ದು, ಇದೂ ಉಳಿತಾಯ ವಾಗುತ್ತದೆ. ಈ ಪಿಪಿಪಿ ಯೋಜನೆಯಲ್ಲಿ ಸ್ಮಾರ್ಟ್ ಸ್ಟ್ರೀಟ್ ಲೈಟ್ ಅಳವಡಿಸುವುದರಿಂದ ನಿರ್ವಹಣಾ ವೆಚ್ಚ ಇರುವುದಿಲ್ಲ. ಇದರಲ್ಲಿ ಆಧುನಿಕ ಮಾದರಿಯ ಈ ವ್ಯವಸ್ಥೆ ಇರುವುದರಿಂದ ಇದರ ಕಮಾಂಡ್ ಸೆಂಟರ್ ನಗರಸಭೆಯ ಕಚೇರಿಯಲ್ಲಿ ಇದ್ದು ಯಾವ ದಾರಿ ದೀಪ ಕೆಟ್ಟು ಹೋದರು ಅಲ್ಲೇ ಗುರುತಿಸುವ ವ್ಯವಸ್ಥೆ ಇರುತ್ತದೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Similar News