ರಾಜ್ಯ, ಕೇಂದ್ರ ಸರಕಾರಗಳ ಬಜೆಟ್ ಕುರಿತು ಸಂವಾದ
ಉಡುಪಿ: ಉಡುಪಿ ಮತ್ತು ಬ್ರಹ್ಮಾವರ ಸಿಐಟಿಯು ತಾಲೂಕು ಸಮಿತಿಯು ಜಂಟಿ ಆಶ್ರಯದಲ್ಲಿ ವಿಮಾ ನೌಕರರ ಸಂಘದ ಕಛೇರಿಯಲ್ಲಿ ರಾಜ್ಯ ಮತ್ತು ಕೇಂದ್ರ ಬಜೆಟ್ ೨೦೨೩ರ ಬಗ್ಗೆ ಸಂವಾದ ಕಾರ್ಯಕ್ರಮ ಸೋಮವಾರ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ವಾಮನ ಪೂಜಾರಿ ವಹಿಸಿದ್ದರು. ಉಡುಪಿ ಜಿಲ್ಲೆಯ ಸಿಐಟಿಯು ಕಾರ್ಯದರ್ಶಿ ಚಂದ್ರಶೇಖರ, ಬಜೆಟ್‌ನಿಂದ ಜನಸಾಮಾನ್ಯರ ಬದುಕಿನ ಮೇಲೆ ಆಗುವಂತಹ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರದ ಬಜೆಟ್ ಗಳು ಶ್ರೀಮಂತ ಉದ್ದಿಮೆದಾರರ ಪರವಾಗಿದ್ದು ಸಾಮಾನ್ಯ ಜನರಿಗೆ ಸಂಕಷ್ಟ ತರಲಿದೆ ಎಂದು ಟೀಕಿಸಿದರು.
ರಾಜ್ಯ ಬಜೆಟ್ ಅಧಿವೇಶನದ ಕೊನೆಯ ದಿನ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿದ ಮಸೂದೆಯನ್ನು ಖಂಡಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲದೆ, ಬಿಜೆಪಿಯ ಶಾಸಕರೊಬ್ಬರ ತೀವ್ರ ವಿರೋಧದ ನಡುವೆಯೂ ಮಸೂದೆಯನ್ನು ಅಂಗೀಕರಿಸಲಾಗಿದೆಂದು ಅವರು ದೂರಿದರು.
ವಿಮಾ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್ ಮಾತನಾಡಿ, ಬಜೆಟ್ ಎಂಬ ಸಮುದ್ರ ಮಂಥನದಲ್ಲಿ ಅಮೃತವನ್ನು ಆಳುವ ವರಿಗೂ ವಿಷವನ್ನು ದುಡಿಯುವ ಜನರಿಗೂ ಹಂಚಲಾಗಿದೆ ಎಂದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮತ್ತು ಸಿಐಟಿಯು ಜಿಲ್ಲಾ ಖಜಾಂಜಿ ಶಶಿಧರ ಗೊಲ್ಲ ಮಾತನಾಡಿದರು. ನಂತರ ಸಂವಾದ ಕಾರ್ಯಕ್ರಮ ನಡೆದು ಜನ ವಿರೋಧಿ ಬಜೆಟ್ ಹಾಗೂ ಕೆಲಸದ ಅವಧಿ ಹೆಚ್ಚಿಸಿದುದನ್ನು ವಿರೋಧಿಸಿ ಜನರ ನಡುವೆ ಪ್ರಚಾರ ನಡೆಸಬೇಕೆಂದು ನಿರ್ಧರಿಸಲಾಯಿತು.
ಉಡುಪಿ ತಾಲೂಕು ಸಮಿತಿಯ ಸಹ ಸಂಚಾಲಕ ಉಮೇಶ್ ಕುಂದರ್ ಸ್ವಾಗತಿಸಿದರು. ಬ್ರಹ್ಮಾವರ ತಾಲೂಕು ಸಮಿತಿ ಸಂಚಾಲಕ ರಾಮ ಕಾರ್ಕಡ ವಂದಿಸಿದರು. ನಳಿನಿ, ಸಂಜೀವ ನಾಯಕ್, ಅಣ್ಣಪ್ಪ ಪೂಜಾರಿ, ಸುಭಾಸ್ ನಾಯಕ್, ರಂಗನಾಥ ಮತ್ತು ದಯಾನಂದ ಕೊರಂಗ್ರಪಾಡಿ, ಸಯ್ಯದ್, ರಮೇಶ್, ಮುರುಳಿ, ರಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.