×
Ad

ಕಾಂಗ್ರೆಸ್ ಗೆ ಈಶಾನ್ಯ ರಾಜ್ಯಗಳಲ್ಲಿ ನಿರಾಸೆ; ತಮಿಳುನಾಡು, ಪ.ಬಂಗಾಳದಲ್ಲಿ ಗೆಲುವಿನ ವಿಶ್ವಾಸ

Update: 2023-03-02 15:03 IST

ಹೊಸದಿಲ್ಲಿ: ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸಾಧನೆಯು ತನ್ನದೇ ಆದ ನಿರೀಕ್ಷೆಗಳಿಗಿಂತ ತೀರಾ ಕಡಿಮೆಯಾಗಿದೆ.  ತಮಿಳುನಾಡು, ಹಾಗೂ  ಪಶ್ಚಿಮ ಬಂಗಾಳದ ಉಪ ಚುನಾವಣೆಯಲ್ಲಿ ಮುನ್ನಡೆಯಲ್ಲಿದ್ದು, ಗೆಲುವಿನ ವಿಶ್ವಾಸದಲ್ಲಿದೆ.

ಮಹಾರಾಷ್ಟ್ರದಲ್ಲಿ  ಬಿಜೆಪಿಯ ಭದ್ರಕೋಟೆಯಾಗಿರುವ  ಕಸ್ಬಾ ಪೇಟ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಪ್ರತಿಷ್ಠೆಯ ಹೋರಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಾಂಗೇಕರ್  ಅವರು ಬಿಜೆಪಿ ಅಭ್ಯರ್ಥಿ ಹೇಮಂತ್ ರಸಾನೆ ಅವರನ್ನು 10,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ ಶುಭ ಸುದ್ದಿ ಬಂದಿದೆ. ಪಕ್ಷವು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ಸೋಲಿಸಲು ಹಾಗೂ  ಮುರ್ಷಿದಾಬಾದ್ ಜಿಲ್ಲೆಯ ಸಾಗರ್ದಿಘಿ ಕ್ಷೇತ್ರವನ್ನು ಆಡಳಿತ ಪಕ್ಷದಿಂದ ಕಸಿದುಕೊಳ್ಳಲು ಸಜ್ಜಾಗಿದೆ. 2011 ರಿಂದ ಟಿಎಂಸಿ ಈ ಕ್ಷೇತ್ರವನ್ನು ಗೆಲ್ಲುತ್ತಿದೆ.

ತಮಿಳುನಾಡಿನ ಈರೋಡ್ ಪೂರ್ವದಲ್ಲಿ ಕಾಂಗ್ರೆಸ್‌ನ ಇವಿಕೆಎಸ್ ಇಳಂಗೋವನ್ ಮುಂದಿದ್ದಾರೆ. ಆದರೆ ಇಳಂಗೋವನ್ ಅವರು ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಯಾಗಿರುವುದರಿಂದ ಹಾಗೂ  ಎಂ.ಕೆ. ಸ್ಟಾಲಿನ್ ನೇತೃತ್ವದ ಸರಕಾರದ ಇಮೇಜ್‌ನಿಂದಾಗಿ ಲಾಭ ಪಡೆದಿದ್ದರಿಂದ ಇದು ಕಾಂಗ್ರೆಸ್‌ನ ಗೆಲುವು ಮಾತ್ರವಲ್ಲ.

ತ್ರಿಪುರಾ ಹಾಗೂ  ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸಾಧನೆ ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದರೂ, ಕಳೆದ ಬಾರಿ ಖಾಲಿಯಾಗಿದ್ದ ತ್ರಿಪುರಾದಲ್ಲಿ ಬೆರಳೆಣಿಕೆಯಷ್ಟು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತು ಮೇಘಾಲಯ ವಿಧಾನಸಭೆಯಲ್ಲಿ ಸ್ವಲ್ಪ ಮಟ್ಟಿಗೆ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮೂಲಕ ಪಕ್ಷವು ಸ್ವಲ್ಪ ಭರವಸೆ ಮೂಡಿಸಿದೆ. ನಾಗಾಲ್ಯಾಂಡ್‌ನಲ್ಲಿ ಪಕ್ಷಕ್ಕೆ ಹೆಚ್ಚಿನ ಭರವಸೆ ಇರಲಿಲ್ಲ.

ಮೇಘಾಲಯದಲ್ಲಿ 2018 ರ ಚುನಾವಣೆಯಲ್ಲಿ 21 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿತ್ತು. ಆದರೆ ಈ ಬಾರಿ ಒಬ್ಬ ಶಾಸಕರಿಲ್ಲದೆ ಚುನಾವಣೆಗೆ ಇಳಿದಿದೆ. ನವೆಂಬರ್ 2021 ರಲ್ಲಿ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸೇರಿದಂತೆ 12 ಶಾಸಕರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರಿದ್ದರು. ಉಳಿದವರೂ  ಬೇರೆ ಪಕ್ಷಗಳಿಗೆ ಸೇರಿದರು.

Similar News