×
Ad

ಬ್ಯಾಡ್ಮಿಂಟನ್‌ ಆಡುತ್ತಿದ್ದಂತೆ ಕುಸಿದು ಬಿದ್ದು ವ್ಯಕ್ತಿ ಸಾವು

ತೆಲಂಗಾಣದಲ್ಲಿ ಎರಡು ವಾರದಲ್ಲಿ ಐದನೇ ಘಟನೆ

Update: 2023-03-02 17:19 IST

ಹೈದರಾಬಾದ್:‌ ಇಲ್ಲಿನ ಪ್ರೊಫೆಸರ್ ಜಯಶಂಕರ್ ಒಳಾಂಗಣ ಕ್ರೀಡಾಂಗಣದಲ್ಲಿ 38 ವರ್ಷದ ವ್ಯಕ್ತಿಯೊಬ್ಬರು ಬ್ಯಾಡ್ಮಿಂಟನ್ ಆಡುತ್ತಿದ್ದಂತೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರಗಳಲ್ಲಿ ತೆಲಂಗಾಣದಲ್ಲಿ ನಡೆದ ಐದನೇ ಘಟನೆ ಇದಾಗಿದೆ. ವ್ಯಕ್ತಿಯನ್ನು ಹೈದರಾಬಾದ್‌ನ ಮಲ್ಕಾಜ್‌ಗಿರಿ ಉಪನಗರಕ್ಕೆ ಸೇರಿದ ಶ್ಯಾಮ್ ಯಾದವ್ ಎಂದು ಗುರುತಿಸಲಾಗಿದ್ದು, ಘಟನೆಯು ಕ್ರೀಡಾಂಗಣದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಯಾದವ್‌ ಕುಸಿದು ಬಿದ್ದಾಗಲೇ ತಕ್ಷಣ ಸಿಪಿಆರ್ ನೀಡಿದ್ದರೆ ಅವರನ್ನು ಉಳಿಸಬಹುದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮೃತ ವ್ಯಕ್ತಿ ಬ್ಯಾಡ್ಮಿಂಟನ್, ಕ್ರಿಕೆಟ್ ಮತ್ತು ಇತರ ಕ್ರೀಡೆಗಳಲ್ಲಿ ಭಾಗವಹಿಸುವ ಉತ್ಸಾಹಿ ಕ್ರೀಡಾಪಟು ಎಂದು ಅವರ ಸಹೋದರ ಹೇಳಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಪ್ರತಿದಿನ ಕೆಲಸದ ನಂತರ ಆಟವಾಡುತ್ತಿದ್ದರು ಎಂದು ಅವರ ಸಹೋದರ ತಿಳಿಸಿದ್ದಾರೆ.

ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲವಾದರೂ, ಇತ್ತೀಚಿನ ಘಟನೆಗಳ ಮಾದರಿಯನ್ನು ಆಧರಿಸಿ, ಹೃದಯ ಸ್ತಂಭನ ಅವರ ಹಠಾತ್ ಸಾವಿಗೆ ಕಾರಣ ಎಂದು ಭಾವಿಸಲಾಗಿದೆ.

ಫಿಟ್ ಮತ್ತು ಆರೋಗ್ಯವಂತರಾಗಿರುವ ಜನರು ಕೂಡಾ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಅನೇಕ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. 

ಇದು ತೆಲಂಗಾಣದಲ್ಲಿ ಹದಿನೈದು ದಿನಗಳಲ್ಲಿ ನಡೆದ ಐದನೇ ಘಟನೆಯಾಗಿದೆ. ಇದಕ್ಕೂ ಮುನ್ನ ತೆಲಂಗಾಣದಲ್ಲಿ ಸಂಬಂಧಿಕರೊಬ್ಬರ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 19 ವರ್ಷದ ಯುವಕ ಕುಸಿದು ಬಿದ್ದು ಸಾವನ್ನಪ್ಪಿದ್ದ. ಹೈದರಾಬಾದ್‌ನಿಂದ 200 ಕಿಮೀ ದೂರದಲ್ಲಿರುವ ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ಫೆಬ್ರವರಿ 20 ರಂದು, ಹೈದರಾಬಾದ್‌ನಲ್ಲಿ ಹಲ್ದಿ ಸಮಾರಂಭದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಸಾವನ್ನಪ್ಪಿದರು.   

ಫೆಬ್ರವರಿ 23 ರಂದು, 24 ವರ್ಷದ ಪೊಲೀಸ್ ಪೇದೆಯೊಬ್ಬರು ಹೈದರಾಬಾದ್‌ನ ಜಿಮ್‌ನಲ್ಲಿ ತಾಲೀಮು ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದರು.

ಫೆಬ್ರವರಿ 24 ರಂದು ಹೈದರಾಬಾದ್‌ನಲ್ಲಿ ಕಾರ್ಮಿಕರೊಬ್ಬರು ಇದ್ದಕ್ಕಿದ್ದಂತೆ ನೋವು ಅನುಭವಿಸಿ ರಸ್ತೆಯಲ್ಲಿ ಕುಸಿದುಬಿದ್ದರು. ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೋಲೀಸ್ ಒಬ್ಬರು ಅವರಿಗೆ ಸಿಪಿಆರ್ ನೀಡುವ ಮೂಲಕ ಅವರ ಜೀವವನ್ನು ಉಳಿಸಿದ್ದರು.

ಇದನ್ನೂ ಓದಿ: ಮುಂದಿನ ವಾರ 4 ಬಿಜೆಪಿ ಮಂತ್ರಿಗಳು ಕಾಂಗ್ರೆಸ್ ಗೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ 

Similar News