×
Ad

ಸೇನಾ ಕಸ್ಟಡಿಯಲ್ಲಿದ್ದ ಕಾಶ್ಮೀರಿ ಯುವಕನ ಮೃತದೇಹ ಪತ್ತೆ: ಹತ್ಯೆಯೆಂದು ಕುಟುಂಬದ ಆರೋಪ

Update: 2023-03-02 23:11 IST

ಶ್ರೀನಗರ,ಮಾ.2: ಸೇನಾ ಕಸ್ಟಡಿಗೊಳಗಾದ ಬಳಿಕ ಎರಡು ತಿಂಗಳುಗಳಿಗೂ ಅಧಿಕ ಸಮಯದಿಂದ ನಾಪತ್ತೆಯಾಗಿದ್ದ ಕಾಶ್ಮೀರಿ ಯುವಕನೊಬ್ಬನ ಮೃತದೇಹವು ಗಡಿಮುಂಚೂಣಿ ಜಿಲ್ಲೆಯಾದ ಕುಪ್ವಾರದ ಅರಣ್ಯ ಪ್ರದೇಶದಲ್ಲಿ ಬುಧವಾರ ಪತ್ತೆಯಾಗಿದೆ.

ಮೃತ ಯುವಕನನ್ನು ಕುನಾನ್ ಗ್ರಾಮದ ನಿವಾಸಿ ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ. ಕುಪ್ವಾರದ ಜಿರ್ಹಾಮಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೃತದೇಹವು ಅರೆಕೊಳೆತ ಸ್ಥಿತಿಯಲ್ಲಿ ಕಾಣಸಿಕ್ಕಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಅಬ್ದುಲ್ ರಶೀದ್ ಸರಕುಸಾಗಾಟ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದನೆಂದು ಆತನ ಕುಟುಂಬಿಕರು ತಿಳಿಸಿದ್ದಾರೆ.

ಮೃತದೇಹವನ್ನು ಗುರುತಿಸಲು ಸ್ಥಳಕ್ಕೆ ಭೇಟಿ ನೀಡುವಂತೆ ಪೊಲೀರು ರಶೀದ್ನ ಕುಟುಂಬಿಕರಿಗೆ ಸೂಚಿಸಿದ್ದರೆಂದು ಕುನಾನ್ ಗ್ರಾಮದ ಸರಪಂಚ ಖುರ್ಷಿದ್ ಅಹ್ಮದ್ ತಿಳಿಸಿದ್ದಾರೆ. ಆದರೆ ಅದಕ್ಕೊಪ್ಪದ ಕುಟುಂಬಿಕರು ಗುರುತುಪತ್ತೆಗಾಗಿ ಮೃತದೇಹವನ್ನು ಕುಪ್ವಾರಕ್ಕೆ ತರಬೇಕೆಂದು ಪಟ್ಟು ಹಿಡಿದಿದ್ದರು. ಆನಂತರ ಮೃತದೇಹವನ್ನು ಕುಪ್ವಾರದ ಜಿಲ್ಲಾಸ್ಪತ್ರೆಗೆ ತರಲಾಯಿತೆಂದು ಅವರು ಹೇಳಿದರು.

ಸೇನೆಯ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ರಶೀದ್ಗಾಗಿ ಶೋಧ ಕಾರ್ಯಾಚರಣೆ ನಡೆದಿತ್ತೆನ್ನಲಾದ ಸ್ಥಳದ ಸಮೀಪದಲ್ಲೇ ಆತನ ಶವ ಪತ್ತೆಯಾಗಿರುವುದಾಗಿ ಜಮ್ಮುಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ ಶಬೀರ್ ತಿಳಿಸಿದ್ದಾರೆ. ಕಾಶ್ಮೀರದಲ್ಲೇ ಅತ್ಯಂತ ಮಿಲಿಟರೀಕರಣಗೊಂಡ ವಲಯದಲ್ಲಿ ರಶೀದ್ , ಸೇನೆಯ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದನೆಂಬುದು ಅತಿ ದೊಡ್ಡ ಸುಳ್ಳಾಗಿದ್ದು ಆತನ ಕೊಲೆಯನ್ನು ಮುಚ್ಚಿಹಾಕುವ ತಂತ್ರವಾಗಿದೆಯೆಂದು ಅವರು ಆರೋಪಿಸಿದ್ದಾರೆ.

ಆದರೆ ಶಬೀರ್ ನ ನಾಪತ್ತೆ ಪ್ರಕರಣದಲ್ಲಿ ಯಾವುದೇ ಕೃತ್ರಿಮ ನಡೆದಿರುವುದನ್ನು ಸೇನಾ ಮೂಲಗಳು ಅಲ್ಲಗಳೆದಿವೆ. ಸೇನಾ ಕಸ್ಟಡಿಯಲ್ಲಿ ರಶೀದ್ನನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಆತ ತನಗೆ ಕುಪ್ವಾರದ ಅರಣ್ಯಪ್ರದೇಶದಲ್ಲಿರುವ ಮರಹಾಮ ಗ್ರಾಮದಲ್ಲಿ ಉಗ್ರರ ಅಡಗುತಾಣದ ಬಗ್ಗೆ ಮಾಹಿತಿಯಿರುವುದಾಗಿ ಹೇಳಿದ್ದ. ಆತ ಸೈನಿಕರನ್ನು ಉಗ್ರರ ಅಡಗುದಾಣವೆನ್ನಲಾದ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ತಪ್ಪಿಸಿಕೊಂಡಿದ್ದಾನೆಂದು ಅಧಿಕೃತ ಮೂಲಗಳು ತಿಳಿಸಿವೆ.

ರಶೀದ್ ನ ಮೃತದೇಹದಲ್ಲಿ ಕೆಂಪು ಕಲೆಯ ಗುರುತುಗಳು ಕಂಡುಬಂದಿದ್ದು. ಬೆಂಕಿ ಹಚ್ಚಿದ ಹಾಗೆ ತೋರುತ್ತದೆ ಎಂದು ಆತನ ಸಹೋದರ ಶಬೀರ್ಹೇಳುತ್ತಾರೆ. ‘‘ ಆತನ ಮುಖಕ್ಕೂ ಪೆಟ್ಟಾಗಿರುವಂತೆ ಕಾಣುತ್ತಿದೆ. ನಾಪತ್ತೆಯಾದ ದಿನದಂದು ಆತ ಧರಿಸಿದ್ದ ಬಟ್ಟೆಗಳು ಕೂಡಾ ಕಾಣೆಯಾಗಿದೆ’’ ಎಂದವರು ಹೇಳಿದ್ದಾರೆ.

ರಶೀದ್ನನ್ನು ಕಳೆದ ವರ್ಷದ ಡಿಸೆಂಬರ್ 15ರಂದು ರಾತ್ರಿ ಕುನಾನ್ ಗ್ರಾಮದಲ್ಲಿರುವ ಆತನ ನಿವಾಸದಿಂದ 41ನೇ ರಾಷ್ಟ್ರೀಯ ರೈಫಲ್ಸ್ ನ ಸೈನಿಕರು ಪೊಲೀಸರಿಗೆ ಮಾಹಿತಿ ನೀಡದೆಯೇ ಕರೆದುಕೊಂಡು ಹೋಗಿದ್ದರು.

ರಶೀದ್ ನ ಬಲವಂತದ ಕಣ್ಮರೆಯನ್ನು ಪ್ರತಿಭಟಿಸಿ ಕಳೆದ ವರ್ಷದ ಡಿಸೆಂಬರ್ 21ರಂದು ಆತನ ಅಸ್ವಸ್ಥ ತಂದೆ, ಇಬ್ಬರು ಸೋದರಿಯರು ಹಾಗೂ ಸಹೋದರ ಶಬೀರ್ ಶ್ರೀನಗರದ ಪತ್ರಿಕಾ ಭವನದ ಸಮೀಪ ಪ್ರತಿಭಟನೆ ನಡೆಸಿದ್ದರು.

ಮೂರುದಶಕಗಳಿಂದ ಭುಗಿಲೆದ್ದಿರುವ ಕಾಶ್ಮೀ ಹಿಂಸಾಚಾರದಲ್ಲಿ ನೂರಾರು ನಾಗರಿಕರು ಭದ್ರತಾ ಪಡೆಗಳ ಕಸ್ಟಡಿಯಿಂದ ನಾಪತ್ತೆಯಾಗಿದ್ದಾರೆ. ಅವರಲ್ಲಿ ಕೆಲವರ ಮೃತದೇಹಗಳು ಪತ್ತೆಯಾಗಿವೆಯಾದರೂ,ಹಲವುಮಂದಿಯ ಸುಳಿವೇ ಈತನಕ ಲಭ್ಯವಾಗಿಲ್ಲ. 1989ರಿಂದೀಚೆಗೆ 8 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು ಅವರ ಸುಳಿವೇ ಲಭ್ಯವಾಗಿಲ್ಲವೆಂದು ಮಾನವಹಕ್ಕು ಸಂಘಟನೆಗಳು ಆರೋಪಿಸಿವೆ.

Similar News