​ಸಗರ್ಡಿಘಿ ವಿಧಾನಸಭಾ ಕ್ಷೇತ್ರದಲ್ಲಿ ಜಯಿಸಿದ ಕಾಂಗ್ರೆಸ್: ಪಶ್ಚಿಮ ಬಂಗಾಳ ವಿಧಾನಸಭೆಗೆ ಪ್ರಪ್ರಥಮ ಕಾಂಗ್ರೆಸ್ ಶಾಸಕ

Update: 2023-03-02 18:08 GMT

ಸಗರ್ಡಿಘಿ: ಸಗರ್ಡಿಘಿ ಉಪ ಚುನಾವಣೆಯಲ್ಲಿ ಬೈರೋನ್ ಬಿಸ್ವಾಸ್ ಗೆಲ್ಲುವ ಮೂಲಕ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕಾಂಗ್ರೆಸ್ ತನ್ನ ಪ್ರಪ್ರಥಮ ಶಾಸಕನನ್ನು ಹೊಂದಿತು. ಈ ಉಪ ಚುನಾವಣೆಯಲ್ಲಿ ಟಿಎಂಸಿಯ ಪ್ರತಿಸ್ಪರ್ಧಿಯನ್ನು 22,980 ಮತಗಳಿಂದ ಬೈರೋನ್ ಬಿಸ್ವಾಸ್ ಪರಾಭವಗೊಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಚುನಾವಣಾ ಆಯೋಗದ ಅಂತರ್ಜಾಲ ತಾಣದ ಪ್ರಕಾರ, ಎಡಪಕ್ಷಗಳ ಬೆಂಬಲ ಪಡೆದಿದ್ದ ಬೈರೋನ್ ಬಿಸ್ವಾಸ್ 16 ಸುತ್ತು ಸಂಪೂರ್ಣಗೊಂಡಾಗ 87,667 ಮತಗಳನ್ನು ಪಡೆದಿದ್ದರು. ಅವರ ಪ್ರತಿಸ್ಪರ್ಧಿಯಾದ ಟಿಎಂಸಿ ಅಭ್ಯರ್ಥಿ ದೇಬಸಿಶ್ ಬ್ಯಾನರ್ಜಿ 64,681 ಮತಗಳು, ಬಿಜೆಪಿಯ ದಿಲೀಪ್ ಸಹಾ 25,815 ಮತಗಳನ್ನು ಪಡೆದಿದ್ದರು.

ಕಳೆದ ವರ್ಷ ರಾಜ್ಯ ಸಚಿವ ಸುಬ್ರತಾ ಸಹಾ ಮೃತಪಟ್ಟಿದ್ದರಿಂದಾಗಿ ಸಗರ್ಡಿಘಿ ಮತಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿಯ ತವರು ಜಿಲ್ಲೆಯಾದ ಮುರ್ಷಿದಾಬಾದ್‌ ವ್ಯಾಪ್ತಿಯ ಕ್ಷೇತ್ರ ಇದಾಗಿದ್ದುದರಿಂದ ಅಧೀರ್ ರಂಜನ್ ಚೌಧರಿ ಪಾಲಿಗೆ ಈ ಉಪ ಚುನಾವಣೆ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿತ್ತು.

ಸ್ವಾತಂತ್ರ್ಯಾನಂತರ ಮೊಟ್ಟಮೊದಲ ಬಾರಿಗೆ 2021ರ ಚುನಾವಣೆಯಲ್ಲಿ  ಕಾಂಗ್ರೆಸ್ ಹಾಗೂ ಎಡಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಗಿದ್ದವು.

Similar News