ಕೇರಳ: ಯುವ ವೈದ್ಯೆ ಆತ್ಮಹತ್ಯೆ; ಸುದ್ದಿ ವಾಹಿನಿಗಳ ದಾರಿ ತಪ್ಪಿಸುವ ಹೆಡ್‌ಲೈನ್‌ಗೆ ಕುಟುಂಬ ಅಸಮಾಧಾನ

Update: 2023-03-02 18:23 GMT

ತಿರುವನಂತಪುರ, ಮಾ. 2: ಕೋಝಿಕ್ಕೋಡ್‌ನ ಮಲಬಾರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದ ೨೫ ವರ್ಷದ ತಾನ್ಶಿಯಾ ಎಂಬವರ ಮೃತದೇಹ ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬುಧವಾರ ಪತ್ತೆಯಾಗಿದೆ. 

ವಯನಾಡ್ ಮೂಲದ ತಾನ್ಶಿಯಾ ಅಪಸ್ಮಾರಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಮಾತ್ರವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ತಾನ್ಶಿಯಾ ಅವರ ಸಂಬಂಧಿಕರು ಹಾಗೂ ಗೆಳೆಯರು ಈ ಘಟನೆಯ ಕುರಿತ ಪ್ರಾದೇಶಿಕ ಮಾಧ್ಯಮಗಳ ವರದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಮಲೆಯಾಳದ ಕೆಲವು ಸುದ್ದಿ ಪೋರ್ಟಲ್‌ಗಳು ಈ ಘಟನೆಯನ್ನು ‘‘ಮಹಿಳಾ ವೈದ್ಯೆಯ ಮೃತದೇಹ ಆಕೆಯ ಗೆಳೆಯನ ಮನೆಯಲ್ಲಿ ಪತ್ತೆ’’ ಎಂದು  ಮುಖ್ಯ ಸುದ್ದಿಯಾಗಿ ಪ್ರಸಾರ ಮಾಡಿದ್ದವು.

‘‘ಘಟನೆಯನ್ನು ವರದಿ ಮಾಡುವಾಗ ಆನ್‌ಲೈನ್ ಪೋರ್ಟಲ್‌ಗಳು ಹಾಗೂ ಟಿ.ವಿ. ವಾಹಿನಿಗಳು ಆಕೆಯ ಫೋಟೊದೊಂದಿಗೆ ಬಳಸಿದ  ಮುಖ್ಯ ಶೀರ್ಷಿಕೆ ನಮಗೆ ತೀವ್ರ ನೋವುಂಟು ಮಾಡಿದೆ’’ ಎಂದು ತಾನ್ಶಿಯಾ ಅವರ ಸೋದರ ಸಂಬಂಧಿ ಅನೀಶಾ ಬಷೀರ್ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

Similar News