×
Ad

ಉತ್ತರಪ್ರದೇಶ: ಅಯೋಧ್ಯೆ ಮಸೀದಿ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿದ ಎಡಿಎ

Update: 2023-03-04 17:21 IST

ಲಕ್ನೋ: ನಕ್ಷೆಯನ್ನು ಸಲ್ಲಿಸಿದ ಸುಮಾರು ಎರಡು ವರ್ಷಗಳ ನಂತರ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು (ಎಡಿಎ) ಶುಕ್ರವಾರ ಅನುಮೋದನೆ ನೀಡಿದ್ದು ಅಯೋಧ್ಯೆ ಜಿಲ್ಲೆಯ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣದ ಹಾದಿಯನ್ನು ಸುಗಮಗೊಳಿಸಿದೆ.

ಅಯೋಧ್ಯೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರವಾಗಿ ನಿರ್ಮಿಸಲಾಗುತ್ತಿರುವ ಮಸೀದಿಯ ನಿರ್ಮಾಣವನ್ನು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಮೇಲ್ವಿಚಾರಣೆ ಮಾಡುತ್ತಿದೆ. ಅಯೋಧ್ಯೆ ಮಸೀದಿ ಮತ್ತು ಸಮುದಾಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ಸಹ ಐಐಸಿಎಫ್ ಟ್ರಸ್ಟ್ ಮಾಡುತ್ತದೆ.

ನವೆಂಬರ್ 9, 2019 ರಂದು ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನುಸಾರವಾಗಿ, ಟ್ರಸ್ಟ್, ಮೇ 2021 ರಂದು, ಮಸೀದಿ ಮತ್ತು ರಚನೆಗಳ ನಕ್ಷೆಗಳನ್ನು ರಚಿಸಿತ್ತು.

ಸುಪ್ರೀಂ ಕೋರ್ಟ್, ತನ್ನ ಅಯೋಧ್ಯೆಯ ತೀರ್ಪಿನಲ್ಲಿ, ಅಯೋಧ್ಯೆ ಕಾಯಿದೆ 1993 ರ ಅಡಿಯಲ್ಲಿ ಸ್ವಾಧೀನಪಡಿಸಿಕೊಂಡ ಪ್ರದೇಶದಲ್ಲಿ ಅಥವಾ ಅಯೋಧ್ಯೆಯ ಯಾವುದೇ ಸೂಕ್ತ‌ ಅಥವಾ ಪ್ರಮುಖ ಸ್ಥಳದಲ್ಲಿ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ 5 ಎಕರೆ ಸೂಕ್ತ ಭೂಮಿಯನ್ನು ಮಂಜೂರು ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿತ್ತು.

ಆದೇಶಕ್ಕೆ ಬದ್ಧವಾಗಿ, ಅಯೋಧ್ಯಾ ಆಡಳಿತವು ಅಯೋಧ್ಯಾ ಪಟ್ಟಣದಿಂದ ಸುಮಾರು 25 ಕಿಮೀ ದೂರದಲ್ಲಿರುವ ಸೊಹಾವಾಲ್ ತಹಸಿಲ್‌ನ ಧನ್ನಿಪುರ ಗ್ರಾಮದಲ್ಲಿ 5 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು.

ಅಯೋಧ್ಯೆ ವಿಭಾಗೀಯ ಆಯುಕ್ತ ಮತ್ತು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೌರವ್ ದಯಾಳ್ ಪ್ರಕಾರ, ಶುಕ್ರವಾರ ನಡೆದ ಎಡಿಎ ಮಂಡಳಿ ಸಭೆಯಲ್ಲಿ ಅಯೋಧ್ಯೆ ಮಸೀದಿಯ ಯೋಜನೆಗೆ ಅನುಮೋದನೆ ನೀಡಲಾಗಿದೆ. ಮಂಜೂರಾದ ನಕ್ಷೆಗಳನ್ನು ಒಂದೆರಡು ದಿನಗಳಲ್ಲಿ ಕೆಲವು ಇಲಾಖಾ ಔಪಚಾರಿಕತೆಗಳ ನಂತರ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.

ಟ್ರಸ್ಟ್ ಕಾರ್ಯದರ್ಶಿ ಅಥರ್ ಹುಸೇನ್ ಪ್ರಕಾರ, ಯೋಜನೆಯ ನಕ್ಷೆಗಳನ್ನು ಸ್ವೀಕರಿಸಿದ ನಂತರ, ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್‌ ಪದಾಧಿಕಾರಿಗಳು ರಂಝಾನ್ ತಿಂಗಳ ಬಳಿಕ ಯೋಜನೆ ಪ್ರಾರಂಭಿಸುವ ಬಗ್ಗೆ ಸಭೆ ನಡೆಸಲಿದ್ದಾರೆ.

ಹೊಸ ಮಸೀದಿಯು ಬಾಬರಿ ಮಸೀದಿಗಿಂತ ದೊಡ್ಡದಾಗಿರಲಿದ್ದು, ಅಯೋಧ್ಯೆಯಲ್ಲಿ ಕೆಡವಲ್ಪಟ್ಟ ಮಸೀದಿಯ ಶೈಲಿಯಲ್ಲಿ ಇರುವುದಿಲ್ಲ, ಮಸೀದಿಯ ರಚನೆಯಲ್ಲಿ ಆಸ್ಪತ್ರೆಯೂ ಇರಲಿದೆ ಎಂದು ಐಐಸಿಎಫ್ ಹೇಳಿದೆ.

ಆಸ್ಪತ್ರೆಯು ಕೇಂದ್ರ ಹಂತವನ್ನು ಹೊಂದಿರುತ್ತದೆ. 1,400 ವರ್ಷಗಳ ಹಿಂದೆ ಪ್ರವಾದಿ ಕಲಿಸಿದಂತೆ ಇಸ್ಲಾಮಿಕ್ ಮನೋಭಾವಕ್ಕೆ ಅನುಗುಣವಾಗಿ ಮಾನವೀಯತೆಗೆ ಸೇವೆ ಸಲ್ಲಿಸುತ್ತದೆ. ಅದರೊಂದಿಗೆ, ಆಸ್ಪತ್ರೆಯು ಸಾಮಾನ್ಯ ಕಾಂಕ್ರೀಟ್ ರಚನೆಯಾಗಿರುವುದಿಲ್ಲ ಬದಲಾಗಿ, ಮಸೀದಿಯ ವಾಸ್ತುಶಿಲ್ಪದೊಂದಿಗೆ ಹೊಂದಿಕೊಂಡಿರುತ್ತದೆ. ಅಲ್ಲದೆ ಅದರ ಗೋಡೆಗಳಲ್ಲಿ ಕ್ಯಾಲಿಗ್ರಫಿ ಮತ್ತು ಇಸ್ಲಾಮಿಕ್ ಚಿಹ್ನೆಗಳನ್ನು ರಚಿಸಲಾಗುತ್ತದೆ ಎಂದು ಐಐಸಿಎಫ್ ಹೇಳಿದೆ.

Similar News