ಮಾ.6ರಿಂದ ಮುಡಾದಿಂದ ಮನೆ ನಿವೇಶನೆಗಳ ಹಂಚಿಕೆಗೆ ಅರ್ಜಿಗಳ ವಿತರಣೆ : ರವಿಶಂಕರ ಮಿಜಾರ್
ಮಂಗಳೂರು, ಮಾ.5: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ ಮಂಗಳೂರು ತಾಲೂಕಿನ ಕುಂಜತ್ತಬೈಲ್‌ನ ಬಡಾವಣೆಯಲ್ಲಿ ಮನೆ ನಿವೇಶನಗಳು ಸಿದ್ಧವಾಗಿದ್ದು , ಹಂಚಿಕೆಗಾಗಿ ಅರ್ಜಿಗಳನ್ನು ಮಾ. 6ರಿಂದ ವಿತರಿಸಲಾಗುವುದು ಎಂದು ಮುಡಾದ ಅಧ್ಯಕ್ಷ ರವಿಶಂಕರ ಮಿಜಾರ್ ತಿಳಿಸಿದ್ದಾರೆ.
ಮೂಡಾದ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಪ್ರಿಲ್ 6ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸಿ ಒಂದು ತಿಂಗಳ ಒಳಗಾಗಿ ನಿವೇಶನದ ಮೌಲ್ಯದ ಶೇ 10 ಶೇಕಡಾ ಮೊತ್ತ ಪಾವತಿಸಿದವರಿಗೆ ಮನೆ ನಿವೇಶನಗಳನ್ನು ಹಂಚಲಾಗುವುದು ಎಂದು ವಿವರಿಸಿದರು.
ಸಾರ್ವಜನಿಕರಿಗೆ ಶೇ. 50, ಇತರೆ ಹಿಂದುಳಿದ ವರ್ಗದವರಿಗೆ ಶೇ 10, ಅನುಸೂಚಿತ ಬುಡಕಟ್ಟುಗಳಿಗೆ ಶೇ. 3, ಅನುಸೂಚಿತ ಜಾತಿಗಳಿಗೆ ಶೇ. 15, ಮಾಜಿ ಸೈನಿಕರು ಅಥವಾ ಮೃತ ಸೈನಿಕರ ಕುಟುಂಬದವರು ಮತ್ತು ಕೇಂದ್ರೀಯ ಸಶಸ್ತ್ರ ಪಡೆಯವರಿಗೆ ಶೇ. 5, ಸರಕಾರ , ಸಾರ್ವಜನಿಕ ವಲಯದ ಉದ್ದಿಮೆ, ಪ್ರಾಧಿಕಾರಗಳ ನೌಕರರಿಗೆ ಶೇ. 2, ಸಾಧಕರಿಗೆ ಶೇ. 5, ಅಂಗವಿಕಲರಿಗೆ ಶೇ 3 ಮೀಸಲಾತಿ ಇದೆ ಎಂದು ಅವರು ತಿಳಿಸಿದರು.
ಕನಿಷ್ಠ 5 ವರ್ಷ ಕರ್ನಾಟಕದ ನಿವಾಸಿಗಳಾಗಿರಬೇಕು: ನಿವೇಶನಕ್ಕೆ ಅರ್ಜಿ ಸಲ್ಲಿಸುವವರು ಕರ್ನಾಟಕದಲ್ಲಿ ಕನಿಷ್ಠ 5 ವರ್ಷಗಳ ಕಾಲ ವಾಸವಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗೆ ಮೀಸಲಾತಿ ಇದ್ದು 6*9 ಮೀಟರ್ ಅಳತೆಯ ನಿವೇಶನ ಆರ್ಥಿಕ ದುರ್ಬಲ ವರ್ಗದವರಿಗೆ ಮಾತ್ರ ನೀಡಲಾಗುವುದು ಎಂದು ರವಿಶಂಕರ ಮಿಜಾರ್ ವಿವರಿಸಿದರು.
ಬ್ಯಾಂಕ್ ಆಫ್ ಬರೋಡದ ವಿಸ್ತೃತ ಕೌಂಟರ್ : 12 ವರ್ಷಗಳ ಬಳಿಕ ನಿಮನೆ ನಿವೇಶನಗಳ ಹಂಚಿಕೆ ಮಾಡಲಾಗುತ್ತಿದ್ದು, ನಿವೇಶನಗಳ ಅರ್ಜಿ ಪಡೆದುಕೊಳ್ಳಲು ಮತ್ತು ಶುಲ್ಕ ತುಂಬಲು ಮೂಡ ಆವರಣದಲ್ಲಿರುವ ಬ್ಯಾಂಕ್ ಆಫ್ ಬರೋಡದ ವಿಸ್ತೃತ ಶಾಖೆಯನ್ನು ಮುಡಾ ಕಚೇರಿಯಲ್ಲಿ ತೆರೆಯಲಾಗಿದೆ. ಇದಕ್ಕಾಗಿ ಪ್ರಾಧಿಕಾರದ ಮತ್ತು ಬ್ಯಾಂಕ್‌ನ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗಿದೆ. ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಬ್ಯಾಂಕ್ ಆಫ್ ಬರೋಡದ ಒಟ್ಟು 25 ಶಾಖೆಗಳಲ್ಲಿ ಅರ್ಜಿ ಪಡೆಯಲು ಮತ್ತು ಶುಲ್ಕ ತುಂಬಲು ವ್ಯವಸ್ಥೆ ಮಾಡಲಾಗಿದೆ ಎಂದು ರವಿಶಂಕರ ಮಿಜಾರು ಮಾಹಿತಿ ನೀಡಿದರು.
ಮನೆ ನಿವೇಶನಕ್ಕಾಗಿ ಅರ್ಜಿಗಳು ಸಿಗುವ ಬ್ಯಾಂಕ್ ಶಾಖೆಗಳು: ಮಂಗಳೂರಿನ ಅಶೋಕ ನಗರ, ಶರವು ದೇವಸ್ಥಾನ ಬಳಿ, ಜ್ಯೋತಿ ವೃತ್ತ, ಭವಂತಿ ಸ್ಟ್ರೀಟ್, ಬಿಜೈ, ಬೋಂದೆಲ್, ಅಳಪೆ, ಅಳಕೆ, ಬೆಂದೂರು, ಕೂಳೂರು, ಜೆಪ್ಪು, ಫಳ್ನೀರ್, ಪಂಪ್‌ವೆಲ್ ಪಣಂಬೂರು, ಸುರತ್ಕಲ್, ಉಳ್ಳಾಲ, ತಲಪಾಡಿ, ಮೂಡುಬಿದಿರೆ, ಮುಲ್ಕಿ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಧರ್ಮಸ್ಥಳ, ಸುಬ್ರಹ್ಮಣ್ಯ.
ಕೊಣಾಜೆ, ಚೇಳ್ಯಾರ್‌ನಲ್ಲಿ ಬಡಾವಣೆ: ಕೊಣಾಜೆಯಲ್ಲಿ ನಿರ್ಮಿಸಿರುವ ಬಡಾವಣೆಯ ನಿವೇಶನಗಳ ಹಂಚಿಕೆ 15 ದಿನಗಳಲ್ಲಿ ಆರಂಭವಾಗಲಿದೆ. ಅಲ್ಲಿ 112 ನಿವೇಶನಗಳು ಲಭ್ಯವಾಗಲಿದೆ. ಚೇಳ್ಯಾರಿನಲ್ಲಿ ಸಿದ್ಧವಾಗಲಿರುವ ಬಡಾವಣೆಯ ಭೂಮಿ ಪೂಜೆ ಕೆಲವೇ ದಿನಗಳಲ್ಲಿ ನಡೆಯಲಿದೆ ಎಂದು ಮಿಜಾರ್ ತಿಳಿಸಿದರು.