×
Ad

ವಿದ್ಯಾರ್ಥಿ ವೇತನ ನಿರಾಕರಣೆ: ವಿದ್ಯಾರ್ಥಿಗೆ ರೂ. 50 ಸಾವಿರ ಪಾವತಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

Update: 2023-03-04 23:20 IST

ಹೊಸದಿಲ್ಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಪ್ರಾಯೋಜಿಸಲಾಗಿರುವ  'INSPIRE' ಯೋಜನೆಯಡಿಯಲ್ಲಿ ಬಿಡುಗಡೆ ಮಾಡಬೇಕಿದ್ದ ವಾರ್ಷಿಕ ವಿದ್ಯಾರ್ಥಿ ವೇತನದ ಮೂರನೆಯ ಕಂತನ್ನು ಬಿಡುಗಡೆ ಮಾಡಲು ನಿರಾಕರಿಸಿದ ಕಾರಣಕ್ಕೆ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗೆ ರೂ. 50 ಸಾವಿರ ನ್ಯಾಯಾಲಯ ವೆಚ್ಚವನ್ನು ಎಂಟು ವಾರಗಳೊಳಗೆ ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ದಿಲ್ಲಿ ಹೈಕೋರ್ಟ್ ಸೂಚಿಸಿದೆ.

ಇದಲ್ಲದೆ ವಿದ್ಯಾರ್ಥಿ ವೇತನದ ಮೂರನೆ ಕಂತಾದ ರೂ. 60,000 ಅನ್ನು ಶೇ. 6ರ ಬಡ್ಡಿಯೊಂದಿಗೆ ವಿದ್ಯಾರ್ಥಿಗೆ ಬಿಡುಗಡೆ ಮಾಡಬೇಕು ಎಂದೂ ನ್ಯಾಯಾಲಯ ನಿರ್ದೇಶಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯು 2017ರಲ್ಲಿ ವಿದ್ಯಾರ್ಥಿಗೆ ವೈಜ್ಞಾನಿಕ ಪ್ರಯತ್ನದಲ್ಲಿನ ಬದಲಾವಣೆಗಾಗಿ ಸ್ಫೂರ್ತಿದಾಯಕ ಸಂಶೋಧನೆ (INSPIRE) ಯೋಜನೆಯಡಿ ವಿದ್ಯಾರ್ಥಿ ವೇತನ ಪ್ರಾಯೋಜಿಸಿತ್ತು. ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಲು ವಿದ್ಯಾರ್ಥಿಗಳು ಹನ್ನೆರಡನೆ ತರಗತಿ ಫಲಿತಾಂಶದಲ್ಲಿ ಕ್ರಮವಾಗಿ ತಮ್ಮ ಪರೀಕ್ಷಾ ಮಂಡಳಿಗಳಿಂದ ಪಡೆದಿರುವ ಮೊದಲ ಶ್ರೇಣಿಯ ಶೇ. 1ರಷ್ಟು ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿರಬೇಕು.

ಈ ಪ್ರಕರಣದಲ್ಲಿ, ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿದ್ದ ವಿದ್ಯಾರ್ಥಿಗೆ ಮೊದಲೆರಡು ವರ್ಷ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿ, ಮೂರನೆಯ ವರ್ಷ ತಡೆ ಹಿಡಿಯಲಾಗಿತ್ತು. ಈ ಯೋಜನೆಯಡಿ ಅರ್ಹತೆ ಪಡೆಯಬೇಕಾದರೆ ವಿದ್ಯಾರ್ಥಿಯ ಸಂಚಿತ ಶ್ರೇಣಿ ಸರಾಸರಿ ಅಂಕವು ಪ್ರಮುಖ ವಿಷಯಗಳಲ್ಲಿ 6.0 ಇರಬೇಕು ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು.

ಕೇಂದ್ರ ಸರ್ಕಾರದ ಈ ನಿಲುವನ್ನು ತಿರಸ್ಕರಿಸಿದ ನ್ಯಾಯಾಲಯವು, ಮಾರ್ಗಸೂಚಿಗಳ ಪ್ರಕಾರ ಒಟ್ಟಾರೆ ವಿಷಯಗಳಲ್ಲಿ ಸಂಚಿತ ಶ್ರೇಣಿ ಸರಾಸರಿ ಅಂಕವು 6.0 ಇರಬೇಕು ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡಿತು. ವಿದ್ಯಾರ್ಥಿಯು ಮೊದಲೆರಡು ಸೆಮಿಸ್ಟರ್‌ಗಳಲ್ಲಿ 7.45 ಹಾಗೂ ಮೂರು ಮತ್ತು ನಾಲ್ಕನೆ ಸೆಮಿಸ್ಟರ್‌ನಲ್ಲಿ 6.32 ಸಂಚಿತ ಶ್ರೇಣಿ ಸರಾಸರಿ ಅಂಕಗಳನ್ನು ಗಳಿಸಿದ್ದು, ಇದು ಅಂಕಮಿತಿಯ ಅಗತ್ಯಕ್ಕಿಂತ ಹೆಚ್ಚಿದೆ ಎಂದೂ ಅಭಿಪ್ರಾಯ ಪಟ್ಟಿತು.

ಇದನ್ನೂ ಓದಿ: ಕಾಲೇಜು ಆವರಣದಲ್ಲಿ ಕುಸಿದು ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

Similar News