ಮಹಾರಾಷ್ಟ್ರ: 6 ಕೆಮ್ಮಿನ ಸಿರಪ್ ತಯಾರಕ ಕಂಪೆನಿಗಳ ಲೈಸನ್ಸ್ ರದ್ದು

Update: 2023-03-04 18:10 GMT

ಮುಂಬೈ,ಮಾ.4: ಕಾನೂನು ನಿಯಮಗಳ ಉಲ್ಲಂಘನೆಗಾಗಿ ರಾಜ್ಯದಲ್ಲಿ ಆರು ಕೆಮ್ಮಿನ ಔಷಧಿ ತಯಾರಕರ ಪರವಾನಗಿಗಳನ್ನು ರದ್ದುಪಡಿಸಲಾಗಿದೆ ಎಂದು  ಮಹಾರಾಷ್ಟ್ರ ಸರಕಾರವು ಶನಿವಾರ ವಿಧಾನಸಭೆಗೆ ತಿಳಿಸಿದೆ.

ಬಿಜೆಪಿಯ ಶಾಸಕ ಅಶೀಷ್ ಶೆಲಾರ್ ಹಾಗೂ ಇತರರು  ನೀಡಿದ ಗಮನಸೆಳೆಯುವ ನೋಟಿಸ್‌ಗೆ ಉತ್ತರಿಸಿದ  ಸಂದರ್ಭದಲ್ಲಿ ಆಹಾರ ಹಾಗೂ ಔಷಧಿ ನಿರ್ವಹಣಾ ಸಚಿವ ಸಂಜಯ್ ರಾಥೋಡ್ ಅವರು ಸದನಕ್ಕೆ ಈ ಮಾಹಿತಿಯನ್ನು ನೀಡಿದರು.

ಉತ್ತರಪ್ರದೇಶದ ನೊಯ್ಡಾದಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯೊಂದು  ತಯಾರಿಸಿದ್ದ ಕೆಮ್ಮಿನ ಸಿರಪ್ ಕಳೆದ ವರ್ಷ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವಿಗೆ ಕಾರಣವಾಗಿದೆಯೆಂದು ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆ ಸಂಸ್ಥೆಯ ಮೂವರು ಉದ್ಯೋಗಿಗಳನ್ನು ನೊಯ್ಡಾ ಪೊಲೀಸರು ಬಂಧಿಸಿದ್ದರು.

ಮಹಾರಾಷ್ಟ್ರದಲ್ಲಿ  ಕೆಮ್ಮಿನ ಸಿರಪ್ ಉತ್ಪಾದಿಸುವ 108 ಕಂಪೆನಿಗಳ ಪೈಕಿ 84 ಕಂಪೆನಿಗಳ ವಿರುದ್ಧ ತನಿಖೆಗೆ ಆಜ್ಞಾಪಿಸಲಾಗಿದೆಯೆಂದು ರಾಥೋಡ್ ತಿಳಿಸಿದರು.
ಕಾನೂನು ಉಲ್ಲಂಘಿಸಿರುವ  4 ಕೆಮ್ಮಿನ ಔಷಧಿ ತಯಾರಕ ಕಂಪೆನಿಗಳಿಗೆ  ಉತ್ಪಾದನೆಯನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ ಹಾಗೂ ಇತರ ಆರು ಕಂಪೆನಿಗಳ ಪರವಾನಗಿಗಳನ್ನು ಅಮಾನತಿನಲ್ಲಿರಿಸಲಾಗಿದೆಯೆಂದು ಅವರು  ತಿಳಿಸಿದರು.

ಕಾನೂನುಗಳ ಉಲ್ಲಂಘನೆಗಾಗಿ ಸುಮಾರು 17 ಕಂಪೆನಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆಯೆದುಂ ಸಚಿವರು ತಿಳಿಸಿದ್ದಾರೆ.
 ಆಫ್ರಿಕದ ರಾಷ್ಟ್ರವಾದ ಗಾಂಬಿಯಾದಲ್ಲಿಯೂ ಕಳೆದ ವರ್ಷ ಭಾರತದಿಂದ ಆಮದು ಮಾಡಲಾದ ಕೆಮ್ಮಿನ ಔಷಧಿಗಳನ್ನು ಸೇವಿಸಿದ 66 ಮಕ್ಕಳ ಸಾವನ್ನಪ್ಪಿರುವ ಘಟನೆಯನ್ನು  ಶೆಲಾರ್ ಸದನದಲ್ಲಿ ಪ್ರಸ್ತಾವಿಸಿದರು.

ಆದರೆ, ಗಾಂಬಿಯಾ ಹಾಗೂ ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್‌ಗಳನ್ನು ತಯಾರಿಸಿದ ಕಂಪೆನಿಗಳು ಹರ್ಯಾಣದಲ್ಲಿ ಕಾರ್ಯಾಚರಿಸುತ್ತಿದ್ದವು ಹಾಗೂ  ಮಹಾರಾಷ್ಟ್ರದಲ್ಲಿ ಅವು ಯಾವುದೇ  ತಯಾರಿಕಾ ಘಟಕಗಳನ್ನು  ಹೊಂದಿಲ್ಲವೆಂದು ಅವರು ತಿಳಿಸಿದರು.

Similar News