ಅತ್ಯಾಚಾರ, ಕೊಲೆ ಪ್ರಕರಣದ ದೋಷಿಯ ಮರಣ ದಂಡನೆ ರದ್ದು

ಘಟನೆ ನಡೆದಾಗ ಆರೋಪಿ ಅಪ್ರಾಪ್ತ ವಯಸ್ಕನೆಂದು ದೃಢಪಟ್ಟ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶ

Update: 2023-03-04 18:20 GMT

ಹೊಸದಿಲ್ಲಿ, ಮಾ.4: ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಯೊಬ್ಬನಿಗೆ ಮರಣದಂಡನೆ ವಿಧಿಸಿ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಶುಕ್ರವಾರ  ತಳ್ಳಿಹಾಕಿದೆ. ಅಪರಾಧ ನಡೆದ ಸಂದರ್ಭದಲ್ಲಿ ಆರೋಪಿಯು ಅಪ್ರಾಪ್ತ ವಯಸ್ಕನಾಗಿದ್ದನೆಂಬುದು   ದೃಢಪಟ್ಟ ಬಳಿಕ ಸುಪ್ರೀಂಕೋರ್ಟ್ ಈ  ಕ್ರಮವನ್ನು ಕೈಗೊಂಡಿದೆ.

ಆರೋಪಿಯನ್ನು ದೋಷಿಯೆಂದು ಪರಿಗಣಿಸಿ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮ್ ನಾಥ ಹಾಗೂ ಸಂಜಯ್  ಕರೋಲ್ ಅವರನ್ನೊಳಗೊಂಡ ನ್ಯಾಯಪೀಠವು ಎತ್ತಿಹಿಡಿದಿದೆ. ಆದರೆ ಘಟನೆ ನಡೆದ ದಿನಾಂಕದಂದು ಆರೋಪಿಯ ವಯಸ್ಸು 15 ವರ್ಷ, 4 ತಿಂಗಳಾಗಿತ್ತೆಂದು  ಮಧ್ಯಪ್ರದೇಶದ ಧಾರ್ ಜಿಲ್ಲೆಯ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಮನಾವರ್ ಸಲ್ಲಿಸಿದ ವರದಿಯನ್ನು ಆಧಾರವಾಗಿಟ್ಟುಕೊಂಡು ಆತನ ಶಿಕ್ಷೆಯನ್ನು ರದ್ದುಗೊಳಿಸಿದೆ.

‘‘ಹಾಲಿ ಪ್ರಕರಣದಲ್ಲಿ  ಆರೋಪಿಗೆ  16 ವರ್ಷಕ್ಕಿಂತಲೂ ಕಡಿಮೆ ವಯಸ್ಸಾಗಿತ್ತು. ಹೀಗಾಗಿ ಆತನಿಗೆ ಗರಿಷ್ಠವೆಂದರೆ ಮೂರು ವರ್ಷಗಳ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದರೆ ಆರೋಪಿಯು ಈಗಾಗಲೇ  ಐದು ವರ್ಷಗಳಿಗೂ ಹೆಚ್ಚು ಅವಧಿಯನ್ನು ಜೈಲಿನಲ್ಲಿ ಕಳೆದಿದ್ದಾನೆ. 3 ವರ್ಷಗಳಿಗೂ ಹೆಚ್ಚು ವರ್ಷ ಆತನಿಗೆ ಶಿಕ್ಷೆ ವಿಧಿಸುವುದು ಕಾನೂನುಬಾಹಿರವಾಗುತ್ತದೆ. ಆದುದರಿಂದ,  ಈಗಿಂದೀಗಲೆ ಆತನನ್ನು ಬಂಧಮುಕ್ತಗೊಳಿಸಬೇಕೆಂದು ನ್ಯಾಯಾಲಯ  ತಿಳಿಸಿತು ಮತ್ತು ಆತನಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ತಳ್ಳಿಹಾಕಿತು.

 ಆರೋಪಿಯ ವಯಸ್ಸಿಗೆ ಸಂಬಂಧಿಸಿ ಬಾಲನ್ಯಾಯ ಮಂಡಳಿಯು ತನಿಖೆಯನ್ನು ನಡೆಸಲು ವಿಫಲವಾಗಿರುವ ಬಗ್ಗೆಯೂ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತನಗೆ ಮರಣದಂಡನೆ ವಿಧಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಮಧ್ಯಪ್ರದೇಶದ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ  ಆರೋಪಿಯು 2018ರ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದನು. ಘಟನೆ ನಡೆದ ಸಂದರ್ಭದಲ್ಲಿ ತಾನು ಬಾಲಕನಾಗಿದ್ದೆ ಎಂದು ಆತ ಮನವಿಯಲ್ಲಿ ತಿಳಿಸಿದ್ದ.ಆನಂತರ ಸುಪ್ರೀಂಕೋರ್ಟ್ ಈ ವಿಷಯವಾಗಿ ಜಿಲ್ಲಾ ನ್ಯಾಯಾಧೀಶರಿಂದ ವರದಿಯನ್ನು ಕೇಳಿತ್ತು. ಆಗ ಅಪರಾಧ ಎಸಗಿದ ಸಮಯದಲ್ಲಿ ಆತನಿಗೆ 15 ವರ್ಷ ವಯಸ್ಸಾಗಿತ್ತೆಂಬುದು ಪತ್ತೆಯಾಗಿತ್ತು.

Similar News