ಜಲಾಲಾಬಾದ್ ಕೋಟೆಯನ್ನು 'ಮನ್ಹಾರ್‌ಖೇಡಾ' ಎಂದು ಮರುನಾಮಕರಣ ಮಾಡಲು ಉತ್ತರ ಪ್ರದೇಶ ಸಿಎಂಗೆ ಮನವಿ

Update: 2023-03-05 10:27 GMT

ಶಾಮ್ಲಿ: ಪ್ರಸ್ತುತ ಆರ್‌ಎಲ್‌ಡಿ ಶಾಸಕ ಥಾನಾಭವಾನ್ ಅಶ್ರಪ್ ಅಲಿಯವರ ಸ್ವಾಧೀನದಲ್ಲಿರುವ ಜಿಲ್ಲೆಯ ಜಲಾಲಾಬಾದ್ ಕೋಟೆ ಮೂಲತಃ ಹಿಂದೂ ಅರಸರಿಗೆ ಸೇರಿದ್ದು ಎಂದು ಮನ್ಹಾರ್ ಖೇರಾ ದುರ್ಗ್ ಕಲ್ಯಾಣ್ ಸಮಿತಿ ಪ್ರತಿಪಾದಿಸಿದೆ. ಈ ಮೂಲಕ ಅಶ್ರಫ್ ಅಲಿ ಕುಟುಂಬ "ಶತಮಾನಗಳಿಂದ" ವಾಸ್ತವ್ಯ ಇರುವ ಈ ಕೋಟೆ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದೆ ಎಂದು timesofindia ವರದಿ ಮಾಡಿದೆ.

ಸಮಿತಿಯ ಕಾರ್ಯದರ್ಶಿ ಭಾನುಪ್ರತಾಪ್ ಸಿಂಗ್ ಮತ್ತು ಹಲವು ಮಂದಿ ಸದಸ್ಯರು ವಿಶೇಷ ಜಿಲ್ಲಾಧಿಕಾರಿ ನಿಖಿತಾ ಶರ್ಮಾ ಅವರನ್ನು ಭೇಟಿ ಮಾಡಿ ಈ ಸಂಬಂಧ ಮುಖ್ಯಮಂತ್ರಿ  ಆದಿತ್ಯನಾಥ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಈ ಪ್ರತಿಪಾದನೆ ಮಾಡಲಾಗಿದೆ.

"ಶತಮಾನಗಳಷ್ಟು ಹಳೆಯದಾದ ಜಲಾಲಾಬಾದ್ ಕೋಟೆ ನೂರಾರು ಎಕರೆ ಪ್ರದೇಶದಲ್ಲಿ ಹರಡಿದೆ. ಇದನ್ನು ಔರಂಗಜೇಬನ ಕಮಾಂಡರ್‌ಗಳ ಪೈಕಿ ಒಬ್ಬರಾದ ಜಲಾಲ್ ಖಾನ್ ಎಂಬವರು ಮೂಲ ಮಾಲಕರಾದ ಹಿಂದೂ ಧರ್ಮಕ್ಕೆ ಸೇರಿದ ಒಬ್ಬರಿಂದ ವಶಪಡಿಸಿಕೊಂಡರು" ಎಂದು ಸಮಿತಿ ಪ್ರತಿಪಾದಿಸಿದೆ. "ಅಶ್ರಫ್ ಅಲಿಯವರು ಈ ಕೋಟೆ ತನ್ನ ಪಿತ್ರಾರ್ಜಿತ ಆಸ್ತಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಮೂಲತಃ ಇದು ಹಿಂದೂ ಅರಸರಿಗೆ ಸೇರಿದ್ದು, ಜಲಾಲ್‌ಖಾನ್ ಈ ರಾಜನಿಗೆ ವಿಷಪ್ರಾಶನ ಮಾಡಿಸಿದ್ದ. ಜಲಾಲಾಬಾದ್ ಕೋಟೆಗೆ ’ಮನ್ಹಾರ್‌ಖೇಡಾ’ ಎಂದು ಮರು ನಾಮಕರಣ ಮಾಡುವ ಜತೆಗೆ ಅದನ್ನು ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ವಶಕ್ಕೆ ಒಪ್ಪಿಸಬೇಕು" ಎಂದು ಆಗ್ರಹಿಸಲಾಗಿದೆ.

ಈ ಕೋಟೆಯನ್ನು ಸೂರ್ಯವಂಶಿ ಕ್ಷತ್ರಿಯ ರಾಜರು ಕಟ್ಟಿದ್ದಾರೆ. ಇದಕ್ಕೆ ಮನ್ಹಾರ್ ಕೋಟೆ ಎಂದು ಹೆಸರಿಡಲಾಗಿತ್ತು. ಇದು 400 ವರ್ಷಕ್ಕೂ ಹೆಚ್ಚು ಹಳೆಯದು. ಜಲಾಲಾಬಾದ್ ಪಟ್ಟಣಕ್ಕೆ ಮನ್ಹಾರ್ ಖೇಡಾ ಎಂದು ಹೆಸರು. ಆದರೆ ಅದ ಹೆಸರನ್ನು ಜಲಾಲಾಬಾದ್ ಎಂದು ಬದಲಿಸಿ ವಶಪಡಿಸಿಕೊಳ್ಳಲಾಗಿದೆ ಎಂದು ಆಪಾದಿಸಲಾಗಿದೆ.

Similar News