ವಿಟ್ಲ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು; ಕೊಲೆ ಪ್ರಕರಣ ದಾಖಲು

Update: 2023-03-05 13:28 GMT

ವಿಟ್ಲ: ವಿಟ್ಲ ಕಸಬ ಗ್ರಾಮದ ದಾಸರಬೆಟ್ಟು ಎಂಬಲ್ಲಿ  ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.‌

ದಾಸರಬೆಟ್ಟು ನಿವಾಸಿ ಇಬ್ರಾಹಿಂ ( 88) ಮೃತಪಟ್ಟವರಾಗಿದ್ದು, ಆರೋಪಿಗಳನ್ನು ಸುಲೈಮಾನ್‌, ಅಬೂಬಕ್ಕರ್‌, ಹಸೈನಾರ್‌, ನಾಸಿರ್‌ ಎಂದು ಗುರುತಿಸಲಾಗಿದೆ. ಅವರ ಪೈಕಿ ಸುಲೈಮಾನ್ ಮತ್ತು ನಾಸೀರ್ ಎಂಬವರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿದ್ದಾರೆ. 

ಘಟನೆಯ ವಿವರ

ಇಬ್ರಾಹಿಂ ಮತ್ತು ಅವರ ಅಣ್ಣ ದಿ. ಮಮ್ಮದ್ ಬ್ಯಾರಿ‌ ಅವರ ಮಕ್ಕಳಾದ ಸುಲೈಮಾನ್‌, ಅಬೂಬಕ್ಕರ್‌ ಹಾಗೂ ಹಸೈನಾರ್‌ ಅವರಿಗೆ ಜಮೀನಿಗೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿದ್ದು, ಬಳಿಕ ರಾಜಿ ಸಂಧಾನದಲ್ಲಿ ಮುಕ್ತಾಯಗೊಂಡಿದ್ದು, ಮಮ್ಮದ್ ಬ್ಯಾರಿರವರ ಜಮೀನು ನೋಂದಣಿಗೆ ಬಾಕಿ ಇದ್ದು, ಅವರ ಮಕ್ಕಳು ಈ ಬಗ್ಗೆ ತಕರಾರು ಮಾಡುತ್ತಿದ್ದು ಫೆ‌.21ರಂದು ಇಬ್ರಾಹಿಂ ಬೆಳಿಗ್ಗೆ ತೋಟಕ್ಕೆ ಹೋದ ಸಮಯ ಆರೋಪಿಗಳಾದ  ಸುಲೈಮಾನ್‌, ಅಬೂಬಕ್ಕರ್‌ ಹಸೈನಾರ್‌ ಹಾಗೂ ನೆರೆಯ ನಾಸಿರ್‌ ಅವರು  ಜಮೀನು ವಿಚಾರದಲ್ಲಿ ಗಲಾಟೆ ನಡೆಸಿದ್ದರು. ಈ ಸಂದರ್ಭ ಆರೋಪಿಗಳು ತೋಟದಲ್ಲಿದ್ದ ಕಲ್ಲುಗಳನ್ನು ಹಾಗೂ ಮರದ ತುಂಡೊಂದನ್ನು ಇಬ್ರಾಹಿಂ ಅವರ ಮೇಲೆ ಎಸೆದಿದ್ದು, ಅವರ ತಲೆಗೆ ಗಂಭೀರ ಗಾಯವಾಗಿ ಕುಸಿದ ಬಿದ್ದಿದ್ದು ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ವಿಟ್ಲ‌ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ರಾಹಿಂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇದೀಗ ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News