×
Ad

ದ.ಕ.ಜಿಲ್ಲೆಯಲ್ಲಿ ಮಾ.11ರಿಂದ‌ ವಿಜಯ ಸಂಕಲ್ಪ ಅಭಿಯಾನ: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ

Update: 2023-03-06 19:19 IST

ಮಂಗಳೂರು : ಕೆಲವೇ ದಿನಗಳಲ್ಲಿ ರಾಜ್ಯ ವಿಧಾನ ಸಭೆ ಚುನಾವಣೆ ಘೋಷಣೆಯಾಗಲಿದ್ದು, ಯಾವುದೇ ಸಂದರ್ಭದಲ್ಲಿ ಚುನಾವಣೆ ದಿನಾಂಕ ಘೋಷಣೆಯಾದರೂ  ಅದನ್ನು ಸಮರ್ಥವಾಗಿ ಎದುರಿಸಲು  ಬಿಜೆಪಿಯು ಸಜ್ಜಾಗಿದೆ ಎಂದು  ಬಿಜೆಪಿಯ  ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೂತ್ ಮಟ್ಟದಿಂದ ಜಿಲ್ಲೆಯ ತನಕ  ಚುನಾವಣೆ ಎದುರಿಸಲು ಇಡೀ ತಂಡ ಸಜ್ಜಾಗಿದೆ ಎಂದು ಹೇಳಿದರು.

ಬೂತ್ ವಿಜಯ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದೆ. ಚುನಾವಣೆಗೆ ಪೂರ್ವಕವಾಗಿ ರಾಜ್ಯದಿಂದ ವಿಜಯ ಸಂಕಲ್ಪ ಯಾತ್ರೆ ಮತ್ತು  ಪ್ರಗತಿ ಸಂಕಲ್ಪ ಯಾತ್ರೆ ಹೊರಟಿದೆ. ಜಿಲ್ಲೆಯಲ್ಲಿ ವಿವಿಧ ಮೋರ್ಚಾಗಳ ಬ್ಯಾನರ್‌ನಡಿಯಲ್ಲಿ  ವಿವಿಧ ಸಮುದಾಯವನ್ನು ಬಿಜೆಪಿ ವೇದಿಕೆಗೆ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ನಾಲ್ಕು ವಿಜಯ ಸಂಕಲ್ಪ ಯಾತ್ರೆ ಉದ್ಘಾಟನೆಗೊಂಡು ಹೊರಟಿದೆ.  ಕೆ.ಎಸ್. ಈಶ್ವರಪ್ಪ, ಆರ್.ಅಶೋಕ್, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಡಾ.ಅಶ್ವಥ್ಥ ನಾರಾಯಣ ನೇತೃತ್ವದ ನಾಲ್ಕು ತಂಡಗಳು ಹೊರಟಿವೆ. ಕೆ.ಎಸ್. ಈಶ್ವರಪ್ಪ  ಮತ್ತು  ಆರ್.ಅಶೋಕ್ ನೇತೃತ್ವದ  ತಂಡ ಮಾ.11ರಂದು ಜಿಲ್ಲೆಗೆ ಪ್ರವೇಶಿಸಲಿದ್ದು, 13ರ ತನಕ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ  ಪಾಳ್ಗೊಳ್ಳಲಿದೆ. ಮಾ.11ರಂದು  ಮಧ್ಯಾಹ್ನ 3 ಗಂಟೆಗೆ ಸುಳ್ಯ ವಿಧಾನ ಸಭಾ ಕ್ಷೇತ್ರ ಮೂಲಕ ಜಿಲ್ಲೆಗೆ ಪ್ರವೇಶಿಸಲಿದೆ.  ಅಲ್ಲಿ ರೋಡ್ ಶೋ ಬಳಿಕ ಸಂಜೆ 5 ಗಂಟೆಗೆ ಪುತ್ತೂರು ಪ್ರವೇಶಿಸಲಿದೆ. ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಾ.12ರಂದು ಬೆಳಗ್ಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ 10:30ಕ್ಕೆ ರೋಡ್ ಶೋ, ಮಧ್ಯಾಹ್ನ 3 ಗಂಟೆಗೆ ಬಂಟ್ವಾಳಕ್ಕೆ, ಸಂಜೆ 5 ಗಂಟೆಗೆ  ಮಂಗಳೂರು  ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆ, ಮಾ.13ರಂದು 10:30ಕ್ಕೆ  ಮಂಗಳೂರು ವಿಧಾನ ಕ್ಷೇತ್ರದಲ್ಲಿ ರೋಡ್ ಶೋ, ಮಧ್ಯಾಹ್ನ 3 ಗಂಟೆಗೆ ಮೂಡಬಿದ್ರೆ ಬಳಿಕ ಕಾರ್ಕಳಕ್ಕೆ ಯಾತ್ರೆ ಪ್ರವೇಶಿಸಲಿದೆ ಎಂದು ಮಾಹಿತಿ ನೀಡಿದರು.

ಮೂರು ದಿನಗಳ ಕಾಲ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕಾರ್ಯಕರ್ತರ  ಮತ್ತು ಮತದಾರರ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಜಿಲ್ಲೆಯಲ್ಲಿ  ವಿವಿಧ ಮೋರ್ಚಾಗಳ ಮೂಲಕ ಸಮಾಜವನ್ನು ಸಂಘಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಮೋರ್ಚಾಗಳ ಮೂಲಕ  ಬಿಜೆಪಿ ವೋಟ್ ಬ್ಯಾಂಕನ್ನು ವೃದ್ಧಿಸುವ ಕಾರ್ಯ ನಡೆಯುತ್ತಿದೆ. ಪ್ರಗತಿ ರಥವು ಈಗಾಗಲೇ ಜಿಲ್ಲೆಯಲ್ಲಿ ಓಡಾಡುತ್ತಿದೆ. 6 ವಾಹನಗಳು ಓಡಾಡುತ್ತಿದೆ. ಮುಂದಿನ ಚುನಾವಣೆ ತನಕ ಜಿಲ್ಲೆಯಲ್ಲಿ ಓಡಾಟ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆ, ಯೋಜನೆಯ ಬಗ್ಗೆ ಪ್ರತಿಬೂತ್ ಮಟ್ಟಕ್ಕೆ ತೆರಳಿ ಮತದಾರರಿಗೆ ಮಾಹಿತಿ ನೀಡಲಿದೆ ಎಂದು ಸುದರ್ಶನ ಮೂಡಬಿದ್ರೆ ಮಾಹಿತಿ ನೀಡಿದರು.

ಪಕ್ಷದ ಧುರೀಣರಾದ ಕಸ್ತೂರಿ ಪಂಜ, ರವಿಶಂಕರ ಮಿಜಾರು, ದೇವದಾಸ ಶೆಟ್ಟಿ, ಈಶ್ವರ ಕಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Similar News