×
Ad

ಪಾಕಿಸ್ತಾನ: ಟಿವಿ ವಾಹಿನಿಗಳಲ್ಲಿ ಇಮ್ರಾನ್ ಭಾಷಣ ಪ್ರಸಾರ ನಿಷೇಧ

Update: 2023-03-06 22:48 IST

ಇಸ್ಲಮಾಬಾದ್, ಮಾ.6: ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಅಧ್ಯಕ್ಷ, ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಭಾಷಣ ಅಥವಾ ಸುದ್ಧಿಗೋಷ್ಟಿಯ ನೇರಪ್ರಸಾರ ಅಥವಾ ವೀಡಿಯೊ ಪ್ರಸಾರ ಮಾಡದಂತೆ ದೇಶದ ಎಲ್ಲಾ ಸೆಟಿಲೈಟ್ ಟಿವಿ ವಾಹಿನಿಗಳಿಗೆ ಪಾಕಿಸ್ತಾನ್ ಇಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ(PEMRA) ಸೂಚಿಸಿರುವುದಾಗಿ ವರದಿಯಾಗಿದೆ.

ಈ ಆದೇಶ ತಕ್ಷಣದಿಂದ ಜಾರಿಗೆ ಬಂದಿರುವುದಾಗಿ ಪಿಇಎಂಆರ್‍ಎ ಆದೇಶದಲ್ಲಿ ಸ್ಪಷ್ಟಪಡಿಸಿದೆ. `ತಮ್ಮ ಭಾಷಣ/ಹೇಳಿಕೆಗಳಲ್ಲಿ ಇಮ್ರಾನ್‍ಖಾನ್ ಸರಕಾರದ ಸಂಸ್ಥೆಗಳ ವಿರುದ್ಧ ನಿರಂತರ ಆಧಾರರಹಿತ ಆರೋಪಗಳನ್ನು ಮಾಡುತ್ತಿರುವುದನ್ನು ಗಮನಿಸಲಾಗಿದೆ. ಅಲ್ಲದೆ ಸರಕಾರಿ ಸಂಸ್ಥೆಗಳು ಮತ್ತು ಅಧಿಕಾರಿಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳ ಮೂಲಕ ದ್ವೇಷವನ್ನು ಪ್ರಸಾರ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಇದು ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಅಡ್ಡಿಯಾಗಿದೆ ಮತ್ತು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ಸಾಧ್ಯತೆಯಿದೆ ಎಂದು ಪಿಇಎಂಆರ್‍ಎ ಹೇಳಿದೆ.

ಸರಕಾರದ ಸಂಸ್ಥೆಗಳ ಮತ್ತು ಅಧಿಕಾರಿಗಳ ವಿರುದ್ಧ ಆಧಾರರಹಿತ ಆರೋಪ, ದ್ವೇಷಪೂರಿತ, ನಿಂದನೀಯ ಮತ್ತು ಅನಗತ್ಯ ಹೇಳಿಕೆಗಳನ್ನು ಪ್ರಸಾರ ಮಾಡುವುದು ಪಾಕಿಸ್ತಾನ ಸಂವಿಧಾನದ ಆರ್ಟಿಕಲ್ 19 ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು  ಎಂದು ಹೇಳಿಕೆ ತಿಳಿಸಿದೆ.

Similar News