ಚುನಾವಣಾ ಆಯೋಗ ಅಧಿಕಾರದಲ್ಲಿರುವವರ ಗುಲಾಮ: ಉದ್ಧವ್ ಠಾಕ್ರೆ

Update: 2023-03-06 18:24 GMT

ಮುಂಬೈ: ಬಂಡಾಯ ಬಣಕ್ಕೆ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಹಂಚಿಕೆ ಮಾಡಿದ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆಯೋಗವನ್ನು ಅಧಿಕಾರದಲ್ಲಿರುವ ಜನರ ಗುಲಾಮ ಎಂದು ಕರೆದಿದ್ದಾರೆ.

ಕೊಂಕಣದ ರತ್ನಗಿರಿ ಜಿಲ್ಲೆಯ ಖೇಡ್‌ನಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಹಾಗೂ ಶಿಂಧೆಯ ಶಿವಸೇನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ಚುನಾವಣಾ ಆಯೋಗದ ನಿರ್ಧಾರ ನಮಗೆ ಸ್ವೀಕರಿಸಲು ಸಾಧ್ಯವಿಲ್ಲ. ಅವರು ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಏಕನಾಥ್ ಶಿಂದೆ ಬಣಕ್ಕೆ ನೀಡಬಹುದು. ಆದರೆ, ನನ್ನ ತಂದೆ (ಬಾಳಾ ಠಾಕ್ರೆ) ಸ್ಥಾಪಿಸಿದ ಪಕ್ಷವನ್ನು ಅವರಿಗೆ ನೀಡಲು ಸಾಧ್ಯವಿಲ್ಲ. ನಾವು ಹಾಗೆ ಮಾಡಲು ಅವಕಾಶ ನೀಡುವುದಿಲ್ಲ’’ಎಂದು ಅವರು ಹೇಳಿದರು.

ಈ ಆಯೋಗ ಅಧಿಕಾರದಲ್ಲಿರುವ ಜನರ ಗುಲಾಮ. ಅದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಆದೇಶಕ್ಕೆ ಅನುಗುಣವಾಗಿ ನಡೆಯುತ್ತಿದೆ. ಅದು ಇಸಿಐ ಎಂದು ಕರೆಯಲು ಅರ್ಹವಲ್ಲ ಎಂದು ಅವರು ಹೇಳಿದರು.

ಚುನಾವಣಾ ಆಯೋಗದ ಕಣ್ಣುಗಳು ಪರೆಯಿಂದ ಮುಚ್ಚಿರದೇ ಇದ್ದರೆ, ಅದರ ಅಧಿಕಾರಿಗಳು ಖೇಡ್‌ಗೆ ಆಗಮಿಸಲಿ ಹಾಗೂ ನಿಜವಾದ ಶಿವಸೇನೆ ಯಾರೆಂದು ನೋಡಲಿ ಎಂದು ಅವರು ಹೇಳಿದ್ದಾರೆ.

ಬಾಳಾ ಠಾಕ್ರೆ ಅವರು ಬಿಜೆಪಿಗೆ ಎಲ್ಲವನ್ನೂ ಮಾಡಿದ ಹೊರತಾಗಿಯೂ ಶಿವಸೇನೆಯೊಂದಿಗೆ ಕ್ರೂರವಾಗಿ ವರ್ತಿಸುತ್ತಿದೆ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಉದ್ಧವ್ ಠಾಕ್ರೆ, ಶಿವಸೇನೆಯನ್ನು ಒಡೆಯುವ ಮೂಲಕ ಬಿಜೆಪಿ ಮರಾಠಿ ಮಾತನಾಡುವ ಜನರು ಹಾಗೂ ಹಿಂದೂ ಸಮುದಾಯದ ಮನಸ್ಸಿಗೆ ನೋವು ಉಂಟು ಮಾಡಿದೆ ಎಂದರು.

Similar News