×
Ad

ವಿದುಷಿ ಆಸ್ತಿಕಾ ಕುದ್ಕಾಡಿ ನಿಧನ

Update: 2023-03-07 21:16 IST

ಪುತ್ತೂರು: ಹೆಸರಾಂತ ನೃತ್ಯ ಗುರು ವಿದ್ವಾನ್ ದಿ. ಕುದ್ಕಾಡಿ ವಿಶ್ವನಾಥ ರೈ ಮತ್ತು ನೃತ್ಯಗುರು ವಿದುಷಿ ನಯನಾ ವಿ. ರೈ ದಂಪತಿಯ ಕಿರಿಯ ಪುತ್ರಿ ವಿದುಷಿ ಅಸ್ತಿಕಾ ಸುನಿಲ್ ಶೆಟ್ಟಿ(46) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಸಮೀಪದ ಪದಡ್ಕದಲ್ಲಿ 'ವಿಶ್ವಕಲಾನಿಕೇತನ' ಸಂಸ್ಥೆ ಯನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದ  ವಿಶ್ವನಾಥ ರೈ ಮತ್ತು ನಯನಾ ರೈ ದಂಪತಿಯ ಇಬ್ಬರು ಪುತ್ರಿಯರಲ್ಲಿ ಕಿರಿಯ ಪುತ್ರಿಯಾಗಿದ್ದ ಆಸ್ತಿಕಾ ರೈ ಅವರು ಬಹರೈನ್ ನಲ್ಲಿ ಪತಿ ಸುನಿಲ್ ಶೆಟ್ಟಿ ಜೊತೆ ವಾಸವಾಗಿದ್ದರು. ಭಾರತದ ಹೆಸರಾಂತ ನಟ ವಿನೋದ್ ಆಳ್ವ ಅವರು ಆಸ್ತಿಕಾ ಅವರ ಸೋದರ ಮಾವ.

ನೃತ್ಯ ಮತ್ತು ಯಕ್ಷಗಾನದಲ್ಲಿ ಪಳಗಿದ್ದ ಆಸ್ತಿಕಾ ಅವರು ಭರತನಾಟ್ಯ ಮತ್ತು ಯಕ್ಷಗಾನ ಕಲಾವಿದೆಯಾಗಿ ಬಹರೈನ್ ನಲ್ಲಿ ಹಲವಾರು ಪ್ರದರ್ಶನ ಗಳನ್ನು ನೀಡಿದ್ದರು. ದಕ್ಷಿಣ ಬಹರೈನ್ ಯಕ್ಷಗಾನ ರಂಗದಲ್ಲಿ ಅವರು ಸುಧನ್ವಮೋಕ್ಷದ ಕೃಷ್ಣನಾಗಿ, ಕೋಟಿಚೆನ್ನಯದ  ಕಿನ್ನಿದಾರುವಾಗಿ, ಶಾಂಭವಿವಿಲಾಸದ  ಶಾಂಭವಿಯಾಗಿ ಇತ್ಯಾದಿ ಪಾತ್ರಗಳಿಗೆ ಜೀವ ತುಂಬಿದ್ದರು. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾದ ಅವರು ಬಹರೈನ್ನಿಂದ ಊರಿಗೆ ಆಗಮಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.

Similar News