ಸರಕಾರದ ಭ್ರಷ್ಟಾಚಾರ ವಿರೋಧಿಸಿ ಮಾ.9ರಂದು ಬೆಳಗ್ಗೆ 9ರಿಂದ ಬಂದ್: ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್
ಮಂಗಳೂರು, ಮಾ.7: ರಾಜ್ಯ ಸರಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಕೆಪಿಸಿಸಿ ನಿರ್ದೇಶನದಂತೆ ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾ.9ರಂದು ಬೆಳಗ್ಗೆ 9ರಿಂದ 11 ಗಂಟೆ ತನಕ ಬಂದ್ ಆಚರಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ಗಂಟೆಗಳ ಕಾಲ ಮಂಗಳೂರಿನ ಮಿನಿ ವಿಧಾನ ಸೌಧದ ಮುಂದೆ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಗುವುದು. ಇದರಿಂದಾಗಿ ಯಾರಿಗೂ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದರು.
ಬಂದ್ ವೇಳೆ ಬಲವಂತವಾಗಿ ಬಸ್‌ಗಳನ್ನು ತಡೆಯುವುದಿಲ್ಲ. ಬಸ್ ತಡೆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು. ಈಗ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾವು ಬಸ್‌ಗಳನ್ನು ತಡೆಯುವುದಿಲ್ಲ. ರಸ್ತೆ ತಡೆ ಮಾಡುವುದಿಲ್ಲ. ಇಂತಹ ಅಹಿತಕರ ಘಟನೆ ನಡೆದರೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು, ಪರೀಕ್ಷೆಗೆ ಅವರು ವರ್ಷವಿಡಿ ನಡೆಸಿದ ಶ್ರಮ ವ್ಯರ್ಥವಾಗಬಹುದು ಎಂದು ಸ್ಪಷ್ಟಪಡಿಸಿದರು.
ಬಂದ್‌ನ ಉದ್ದೇಶ ಸರಕಾರದ ವಿರುದ್ಧ ಆಗಿದೆ. ಕರ್ನಾಟಕ ಸರಕಾರದ 40 ಪರ್ಸೆಂಟ್ ಕಮಿಶನ್ ದೇಶಾದ್ಯಂತ ಸದ್ದು ಮಾಡುತ್ತಿದೆ. ನಮ್ಮ ಮುಖ್ಯ ಮಂತ್ರಿ ದೇಶದ ಯಾವುದೇ ರಾಜ್ಯಗಳಿಗೂ ಹೋದರೂ ಅಲ್ಲಿ 40 ಪರ್ಸೆಂಟ್ ಮುಖ್ಯಮಂತ್ರಿ ಎಂಬ ಬ್ಯಾನರ್‌ನ ಸ್ವಾಗತ ಕಂಡು ಬರುತ್ತಿದೆ. ಇದರಿಂದಾಗಿ ಕರ್ನಾಟಕದ ಜನತೆಗೆ ಅವಮಾನ ಆಗುತ್ತಿದೆ ಮತ್ತು ಕರ್ನಾಟಕದ ಪ್ರತಿಷ್ಠೆತೆಗೆ ಧಕ್ಕೆ ಉಂಟಾಗಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿಮೀರಿ ಬೆಳೆದಿದೆ ಎಂದು ತಿಳಿಸಿದರು.
ಪ್ರಧಾನಿಗೆ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಪತ್ರ ಬರೆದರೆ ಪ್ರಯೋಜನ ಇಲ್ಲ. ಮುಖ್ಯಮಂತ್ರಿ ಈ ಬಗ್ಗೆ ಮನವಿ ಸಲ್ಲಿಸಿದರೆ ಅವರು ಪುರಾವೆ ಕೇಳುತ್ತಾರೆ. ಪುರಾವೆ ಅವರಿಗೆ ಯಾಕೆ ? ಈಗ ಪಿಎಸ್‌ಐ ಹಗರಣ, ಅಧ್ಯಾಪಕರ ನೇಮಕಾತಿಯಲ್ಲಿ ಭ್ರಷ್ಟಾಚಾರ, ಮೆಸ್ಕಾಂ ಅಧಿಕಾರಿಗಳ ನೇಮಕ, ವಿವಿ ಉಪಕುಲಪತಿಗಳ ನೇಮಕ ಮತ್ತು ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಮಾಡಿರುವ 40 ಪರ್ಸೆಂಟ್ ಕಮಿಷನ್ ಆರೋಪ ಪ್ರಕರಣಗಳ ಪುರಾವೆ ಅವರಿಗೆ ತನಿಖೆಗೆ ಸಾಕಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕರಿಂದಲೇ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದೆ. ಭ್ರಷ್ಟಾಚಾರ ಆರೋಪದಲ್ಲಿ ಧಾರವಾಹಿಯಂತೆ ಇವರ ಕರ್ಮಕಾಂಡ ಹೊರಬರುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇದು ಸಾಕಾಗುವುದಿಲ್ಲ. ಅವರ ಮೂಗಿನ ನೇರಕ್ಕೆ ಭ್ರಷ್ಟಾಚಾರ ನಡೆಯುತ್ತಿದರೂ ಅವರು ಪುರಾವೆ ಕೇಳುತ್ತಿದ್ದಾರೆ. ಇನ್ನು ಅವರು ಪುರಾವೆ ಕೇಳುವುದನ್ನು ನಿಲ್ಲಿಸಬೇಕು. ಇನ್ನು ಪುರಾವೆ ಕೇಳಿದರೆ ಮುಖ್ಯ ಮಂತ್ರಿ ಮನೆಯಲ್ಲಿ ಸಾವಿರ ಕೋಟಿ ರೂ. ಸಿಗಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಕ್ಷದ ಧುರೀಣರಾದ ಭರತ್ ಮುಂಡೋಡಿ, ಸುಭೋದಯ ಆಳ್ವ ಉಪಸ್ಥಿತರಿದ್ದರು.