ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಕನ್ನಡ ಭವನಕ್ಕೆ ಶೀಘ್ರ ಶಿಲಾನ್ಯಾಸ
ಮಂಗಳೂರು: ಕಾಸರಗೋಡಿನ ಪೆರಡಾಲದಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಸಾಂಸ್ಕೃತಿಕ ಕನ್ನಡ ಅಧ್ಯಯನ ಭವನ ನಿರ್ಮಾಣ ಕಾಮಗಾರಿಗೆ ಈ ತಿಂಗಳ ಅಂತ್ಯದೊಳಗೆ ಶಿಲಾನ್ಯಾಸ ನೆರವೇರಿಸಲು ಕಟ್ಟಡ ಸಮಿತಿ ನಿರ್ಧರಿಸಿದೆ.
ನಗರದಲ್ಲಿ ಬುಧವಾರ ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಅಧ್ಯಯನ ಭವನ ನಿರ್ಮಾಣ ಕಟ್ಟಡ ಸಮಿತಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಸಮಿತಿಯ ಅಧ್ಯಕ್ಷ ದುರ್ಗಾಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು.
ಭವನ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಸರಕಾರ 2 ಕೋ.ರೂ.ಅನುದಾನ ಮಂಜೂರು ಮಾಡಿದೆ. 6 ಸಾವಿರ ಚದರ ಅಡಿ ಕೆಳ ಅಂತಸ್ತು ಮತ್ತು 6 ಸಾವಿರ ಚದರ ಅಡಿ ಮೇಲಂತಸ್ತು ಇರುವ ಭವನ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಸುಸಜ್ಜಿತ ಸಭಾಂಗಣ ಹೊಂದಲಿದೆ ಎಂದು ಅಭಿಯಂತರ ಗೋಪಿನಾಥ ಶೆಟ್ಟಿ ಮಾಹಿತಿ ನೀಡಿದರು.
ಕಟ್ಟಡದ ನೀಲನಕ್ಷೆ ಹಾಗೂ ಕಾಮಗಾರಿ ಸಂಬಂಧಿಸಿದ ವಿವರಗಳನ್ನು ದ.ಕ.ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹೇಳಿದರು.
ಅಧ್ಯಯನ ಭವನದ ನಿರ್ವಹಣೆಗೆ ಭವಿಷ್ಯದಲ್ಲಿ ಆದಾಯದ ಅಗತ್ಯತೆಯನ್ನು ಗಮನದಲ್ಲಿರಿಸಿ ಸಭಾಂಗಣವನ್ನು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ನಿರ್ಮಿಸಬೇಕು ಎಂದು ಸಮಿತಿಯ ಗೌರವಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಲಹೆ ನೀಡಿದರು.
ಸಮಿತಿಯ ಉಪಾಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಕಾರ್ಯದರ್ಶಿ ಡಾ.ಪ್ರಸನ್ನ ರೈ ಕಲ್ಲಕಳಿಯ, ಸದಸ್ಯ ಅಜಿತ್ ಕುಮಾರ್ ರೈ ಮಾಲಾಡಿ, ಕಾನೂನು ಸಲಹೆಗಾರ ಕಳ್ಳಿಗೆ ತಾರಾನಾಥ ಶೆಟ್ಟಿ ಸಲಹೆ ನೀಡಿದರು.
ಸಭೆಯಲ್ಲಿ ದ.ಕ.ಜಿಲ್ಲಾಧಿಕಾರಿ ಕಚೇರಿ ಪ್ರತಿನಿಧಿ ಅಭಿಷೇಕ್ ವಿ., ಡಾ.ಆಶಾಜ್ಯೋತಿ ರೈ, ಪತ್ರಕರ್ತರಾದ ಪಿ.ಬಿ.ಹರೀಶ್ ರೈ, ಭಾಸ್ಕರ ರೈ ಕಟ್ಟ, ಪುಷ್ಪರಾಜ್ ಬಿ.ಎನ್. ರಾಜೇಶ್ ಶೆಟ್ಟಿ ದಡ್ಡಂಗಡಿ ಉಪಸ್ಥಿತರಿದ್ದರು.