ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯಿಂದ ಮಹಿಳಾ ದಿನಾಚರಣೆ

Update: 2023-03-08 14:50 GMT

ಮಂಗಳೂರು: ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಹಾಗಾಗಿ ಎಲ್ಲಾ ವರ್ಗದ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ಕಲ್ಪಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಇಂದಿನ ಒತ್ತಡದ ದಿನಗಳಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ ಹೇಳಿದರು.

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರೆಡ್‌ಕ್ರಾಸ್ ಸೊಸೈಟಿಯ ಮಹಿಳಾ ಮತ್ತು ಮಕ್ಕಳ ಸುರಕ್ಷಾ ಸಮಿತಿಯ ವತಿಯಿಂದ ಅನ್ವೇಷಣಂ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ತಣ್ಣೀರುಬಾವಿ ಬೀಚ್‌ನಲ್ಲಿ  ರೆಡ್‌ಕ್ರಾಸ್‌ನ ಮಹಿಳಾ ಸದಸ್ಯರಿಗೆ ನಡೆದ ಸೃಜನಶೀಲ ಚಿಕಿತ್ಸಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅನ್ವೇಷಣಂ ಸಂಸ್ಥೆಯ ನಿರ್ದೇಶಕಿ  ಸಚಿತಾ ನಂದಗೋಪಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ರೆಡ್‌ಕ್ರಾಸ್ ಸೊಸೈಟಿಯ ಖಜಾಂಚಿ ಮೋಹನ ಶೆಟ್ಟಿ, ನಿರ್ದೇಶಕ ರವೀಂದ್ರನಾಥ ಉಚ್ಚಿಲ, ಸುಧೀರ್ ಉಚ್ಚಿಲ, ಕೆ.ಸುಧಾಕರ ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಸುರಕ್ಷಾ ಸಮಿತಿಯ ಮುಖ್ಯಸ್ಥೆ ಡಾ.ಸುಮನಾ ಬೋಳಾರ್ ಸ್ವಾಗತಿಸಿದರು.

Similar News