ಗುಜರಾತ್:‌ ಐಎಎಸ್‌ ಅಧಿಕಾರಿಯನ್ನು ಒತ್ತೆಯಾಳಾಗಿರಿಸಿ ಥಳಿತ, ಮೂವರ ಬಂಧನ

Update: 2023-03-08 17:32 GMT

ಹಿಮ್ಮತ್‌ನಗರ: ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಧರೋಯ್ ಅಣೆಕಟ್ಟಿನ ಬಳಿಯ ಹಳ್ಳಿಯೊಂದರಲ್ಲಿ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದ ಜನರ ಗುಂಪೊಂದು ಐಎಎಸ್ ಅಧಿಕಾರಿ ನಿತಿನ್ ಸಾಂಗ್ವಾನ್ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಥಳಿಸಿದ್ದಾರೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.

ಮೀನುಗಾರಿಕೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳು ಪತ್ತೆಯಾದ ಕಾರಣ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮೀನುಗಾರಿಕಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಸಾಂಗ್ವಾನ್ ಅವರು ಸೋಮವಾರ (ಮಾರ್ಚ್ 6) ತನ್ನ ಅಧೀನ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಪ್ರವಾಸಕ್ಕೆ ಬಂದಿದ್ದಾಗ ದಾಳಿಗೊಳಗಾಗಿದ್ದಾರೆ. ಆದರೆ ಈಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸಬರಕಾಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ವಿಶಾಲ್ ವಘೇಲಾ ತಿಳಿಸಿದ್ದಾರೆ.

ಐಎಎಸ್ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

"ಅಪರಾಧದಲ್ಲಿ ಭಾಗಿಯಾಗಿರುವ ಮೂವರನ್ನು ಈಗಾಗಲೇ ಬಂಧಿಸಲಾಗಿದೆ, ಇತರ ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ" ಎಂದು ವಘೇಲಾ ಹೇಳಿದ್ದಾರೆ.

ಬಂಧಿತರನ್ನು ಬನಸ್ಕಾಂತ ಜಿಲ್ಲೆಯ ನಿವಾಸಿಗಳಾದ ದಿಲೀಪ್ ಪರ್ಮಾರ್, ನೀಲೇಶ್ ಗಮಾರ್ ಮತ್ತು ವಿಷ್ಣು ಗಮಾರ್ ಎಂದು ಗುರುತಿಸಲಾಗಿದೆ.

Similar News