"ಹೊಟೇಲ್, ರೆಸ್ಟೋರೆಂಟ್, ವಿಮಾನ ನಿಲ್ದಾಣಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಕೊಠಡಿ ಮೀಸಲು ಬೇಡ"
ಕೇಂದ್ರ ಸರಕಾರಕ್ಕೆ ತಜ್ಞರ ಆಗ್ರಹ
ಹೊಸದಿಲ್ಲಿ, ಮಾ. 8: ಧೂಮಪಾನದಿಂದ ಪರೋಕ್ಷವಾಗಿ ಬಾಧಿತರಾಗುವ ಜನರನ್ನು ರಕ್ಷಿಸಲು ಹೊಟೇಲ್, ರೆಸ್ಟೋರೆಂಟ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಕೊಠಡಿ ಮೀಸಲಿರಿಸದಂತೆ ಹೊಟೇಲ್ ಅಸೋಸಿಯೇಷನ್, ವೈದ್ಯರು, ಕ್ಯಾನ್ಸರ್ ಸಂತ್ರಸ್ತರು ‘ಧೂಮಪಾನ ರಹಿತ ದಿನ’ವಾದ ಬುಧವಾರ ಸರಕಾರವನ್ನು ಆಗ್ರಹಿಸಿದ್ದಾರೆ.
ಸಿಗರೇಟು ಹಾಗೂ ಇತರ ಹೊಗೆಸೊಪ್ಪು ಉತ್ಪನ್ನಗಳ ಕಾಯ್ದೆ (ಕೊಟ್ಪಾ)-2003ಕ್ಕೆ ತಿದ್ದುಪಡಿ ಪ್ರಕ್ರಿಯೆ ಆರಂಭಿಸಿರುವುದಕ್ಕಾಗಿ ಕೇಂದ್ರ ಸರಕಾರವನ್ನು ಪ್ರಶಂಸಿರುವ ಅವರು, ದೇಶವನ್ನು ಶೇ. 100 ಧೂಮಪಾನ ಮುಕ್ತ ಮಾಡಲು ಧೂಮಪಾನ ಪ್ರದೇಶಕ್ಕೆ ಅನುಮತಿ ನೀಡುವ ಪ್ರಸಕ್ತ ನಿಯಮವನ್ನು ಕೂಡಲೇ ತೆಗೆದು ಹಾಕುವಂತೆ ಆಗ್ರಹಿಸಿದೆ.
‘‘ಧೂಮಪಾನ ಶ್ವಾಸಕೋಶದ ಕಾರ್ಯನಿರ್ವಹಣೆಯನ್ನು ಹದಗೆಡಿಸುತ್ತದೆ. ಶೇ. 100 ಧೂಮಪಾನ ಮುಕ್ತ ಪರಿಸರದ ಖಾತರಿ ನೀಡಲು ಹೊಟೇಲ್, ರೆಸ್ಟೋರೆಂಟ್ ಹಾಗೂ ವಿಮಾನ ನಿಲ್ದಾಣಗಳಲ್ಲಿ ಮೀಸಲಿರಿಸಲಾದ ಧೂಮಪಾನ ಪ್ರದೇಶದ ಸೌಲಭ್ಯವನ್ನು ರದ್ದುಗೊಳಿಸಬೇಕು’’ ಎಂದು ಮ್ಯಾಕ್ಸ್ ಇನ್‌ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಕೇರ್‌ನ ಅಧ್ಯಕ್ಷ ಡಾ. ಹರಿತ್ ಚತುರ್ವೇದಿ ಹೇಳಿದ್ದಾರೆ.
‘‘ಹೆಚ್ಚಿನ ಧೂಮಪಾನ ಮೀಸಲು ಪ್ರದೇಶಗಳು ಕೊಟ್ಪಾದ ಅವಶ್ಯಕತೆಗಳಿಗೆ ಅನುಗುಣವಾಗಿರುವುದು ತುಂಬಾ ವಿರಳ. ಇದರಿಂದ ಧೂಮಪಾನಿಗಳಲ್ಲದ ಇತರರು ಅನಾರೋಗ್ಯದ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ’’ ಎಂದು ಅವರು ತಿಳಿಸಿದ್ದಾರೆ.