ಪತ್ನಿ ಮುನಿಸಿಕೊಂಡಿದ್ದಾಳೆ, ಹೋಳಿ ಆಚರಣೆಗೆ ಹತ್ತು ದಿನಗಳ ರಜೆ ನೀಡಿ: ಇನ್‍ಸ್ಪೆಕ್ಟರ್ ರಜಾ ಅರ್ಜಿ ವೈರಲ್
ಮುಜಾಫರ್ ನಗರ: ಹಬ್ಬದ ಋತುವಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕೆಲಸ ಹೆಚ್ಚು ಹಾಗೂ ರಜೆ ಸಿಗುವುದು ದುರ್ಲಭ. ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ ಇನ್‍ಸ್ಪೆಕ್ಟರ್ ಒಬ್ಬರು ಹೋಳಿ ಹಬ್ಬದ ಆಚರಣೆಗೆ 10 ದಿನಗಳ ರಜೆಗೆ ಸಲ್ಲಿಸಿರುವ ಅರ್ಜಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಣ ಇಷ್ಟೇ; ದಾಂಪತ್ಯದ ಅಪಶ್ರುತಿ ಸರಿಪಡಿಸಬೇಕಾದರೆ ತಾವು ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಇನ್‍ಸ್ಪೆಕ್ಟರ್ ರಜೆ ಅರ್ಜಿಯಲ್ಲಿ ಕೋರಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸಲ್ಲಿಸಿರುವ ರಜೆ ಅರ್ಜಿಯಲ್ಲಿ ಇನ್‍ಸ್ಪೆಕ್ಟರ್ ಅಶೋಕ್ ಕುಮಾರ್, ಕಳೆದ 22 ವರ್ಷಗಳಿಂದ ಭಾವಂದಿರ ಜತೆ ಹೋಳಿ ಹಬ್ಬ ಆಚರಿಸದೇ ಇರುವ ಕಾರಣದಿಂದ ಪತ್ನಿ ಮುನಿಸಿಕೊಂಡಿದ್ದಾಳೆ. ಪತ್ನಿ ಈ ಬಾರಿ ಇನ್ನಷ್ಟು ಕಠಿಣವಾಗಿದ್ದಾಳೆ ಎಂದು ವಿವರಿಸಿದ್ದಾರೆ.
"ನನ್ನ ವಿವಾಹವಾಗಿ 22 ವರ್ಷ ಕಳೆದಿದೆ. ಈ ಅವಧಿಯಲ್ಲಿ ನನ್ನ ಪತ್ನಿ ಹೋಳಿ ಸಂದರ್ಭದಲ್ಲಿ ತವರು ಮನೆಗೆ ಹೋಗಲು ಸಾಧ್ಯವಾಗಿಲ್ಲ. ಆದ್ದರಿಂದ ನನ್ನ ಬಗ್ಗೆ ಮುನಿಸಿಕೊಂಡಿದ್ದಾಳೆ. ಈ ಬಾರಿಯಾದರೂ ತೆರಳಲೇಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಆದರೆ ಯಾವುದೇ ರಜೆ ಇಲ್ಲದ ಕಾರಣ ಹೋಗಲು ಸಾಧ್ಯವಾಗುತ್ತಿಲ್ಲ. ನನ್ನ ಸಮಸ್ಯೆ ಮತ್ತು ಪರಿಸ್ಥಿತಿ ಅರ್ಥ ಮಾಡಿಕೊಂಡು ದಯವಿಟ್ಟು 10 ದಿನಗಳ ಸಾಂದರ್ಭಿಕ ರಜೆ ಮಂಜೂರು ಮಾಡಿ" ಎಂದು ಕೋರಿದ್ದಾರೆ.
ಇದನ್ನು ಓದಿದ ಎಸ್ಪಿ, ಮಾರ್ಚ್ 5 ರಿಂದ ಐದು ದಿನಗಳ ರಜೆ ಮಂಜೂರು ಮಾಡಿದ್ದಾರೆ!