ವಲಸಿಗ ಕಾರ್ಮಿಕರ ಮೇಲಿನ ದಾಳಿ ಕುರಿತ ವೀಡಿಯೋ ನಕಲಿ ಎಂದ ತಮಿಳುನಾಡು ಪೊಲೀಸರು

ಕಾನೂನು ಕ್ರಮದ ಎಚ್ಚರಿಕೆ

Update: 2023-03-09 08:59 GMT

ಚೆನ್ನೈ/ಹೊಸದಿಲ್ಲಿ: ಬಿಹಾರ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದ ಬಿಹಾರ ವಲಸೆ ಕಾರ್ಮಿಕರ ಮೇಲಿನ ಹಲ್ಲೆ ವಿಡಿಯೊ ನಕಲಿ ಎಂದಿರುವ ತಮಿಳುನಾಡು ಪೊಲೀಸರು, ಆತನ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ತಮಿಳುನಾಡಿನಲ್ಲಿ ಬಿಹಾರ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ರಾಜ್ಯಾದ್ಯಂತ ಆತಂಕ ಸೃಷ್ಟಿಯಾಗಿ ಬಹುತೇಕ ಬಿಹಾರಕ್ಕೆ ಸೇರಿದ್ದ ಕೆಲವು ಕಾರ್ಮಿಕರು ತಮಿಳುನಾಡು ತೊರೆದಿದ್ದರು. ಇದರ ಬೆನ್ನಿಗೇ ವಲಸೆ ಕಾರ್ಮಿಕರ ಕುರಿತ ನಕಲಿ ಸುದ್ದಿಗಳನ್ನು ಭೇದಿಸುವುದು ಹೇಗೆ ಎಂಬ ಬಗ್ಗೆ ತಮಿಳುನಾಡು ಪೊಲೀಸರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದರು. ಇದಾದ ಮರುದಿನ ಪೊಲೀಸರಿಂದ ಮೇಲಿನ ಎಚ್ಚರಿಕೆ ಬಂದಿದೆ ಎಂದು ndtv.com ವರದಿ ಮಾಡಿದೆ.

ತನ್ನನ್ನು ತಾನು ಸಾರ್ವಜನಿಕ ವ್ಯಕ್ತಿ ಹಾಗೂ ಪತ್ರಕರ್ತ ಎಂದು ಟ್ವಿಟರ್‌ನಲ್ಲಿ ಗುರುತಿಸಿಕೊಂಡಿರುವ ಮನೀಶ್ ಕಶ್ಯಪ್ ಎಂಬ ವ್ಯಕ್ತಿ, ಕೆಲವು ವ್ಯಕ್ತಿಗಳು ಮುಖಕ್ಕೆ ಬ್ಯಾಂಡ್ ಏಡ್ ಪಟ್ಟಿ ಹಾಕಿಕೊಂಡು, ನಮ್ಮ ಮೇಲೆ ಹಲ್ಲೆ ನಡೆದ ನಂತರ ನಾವು ಹೇಗೆ ಮನೆಗೆ ಮರಳಿದೆವು ಎಂದು ಹೇಳುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದರು. ಆ ಮಾತು ಶುರುವಾಗುವ ಮುನ್ನ ಓರ್ವ ವ್ಯಕ್ತಿ ನಗುತ್ತಿರುವುದೂ ಆ ವಿಡಿಯೊದಲ್ಲಿ ಸೆರೆಯಾಗಿತ್ತು.

ಆ ವಿಡಿಯೊವನ್ನು ಉಲ್ಲೇಖಿಸಿರುವ ತಮಿಳುನಾಡು ಪೊಲೀಸರು, ಆ ಘಟನೆ ನಮ್ಮ ರಾಜ್ಯದಲ್ಲಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ತಮಿಳುನಾಡು ಪೊಲೀಸರು, "ನೀವು ಪ್ರತಿಯೊಬ್ಬರನ್ನೂ ವಂಚಿಸಲು ಸಾಧ್ಯವಿಲ್ಲ. ಈ ಘಟನೆ ನಮ್ಮ ರಾಜ್ಯ(ತಮಿಳುನಾಡು)ದಲ್ಲಿ ನಡೆದಿಲ್ಲ. ಇದು ಸಂಪೂರ್ಣವಾಗಿ ಪೂರ್ವನಿರ್ಧಾರಿತವಾದದ್ದು. ದಯವಿಟ್ಟು ವಾಸ್ತವವನ್ನು ಪರಿಶೀಲಿಸಿ ಮತ್ತು ಟ್ವೀಟ್ ಮಾಡಿ. ಕಠಿಣ ಕಾನೂನು ಕ್ರಮ ಇದರೊಂದಿಗೆ ಜಾರಿಯಾಗಲಿದೆ" ಎಂದು ಎಚ್ಚರಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ತನ್ನ ಟ್ವೀಟ್‌ನೊಂದಿಗೆ ಟ್ಯಾಗ್ ಮಾಡಿದ್ದ ಕಶ್ಯಪ್, ಅಂತಹ ಯಾವುದೇ ದಾಳಿ ನಡೆದಿಲ್ಲ ಎಂದು ಬಿಹಾರದ ಜನರಿಗೆ ಸುಳ್ಳು ಹೇಳುತ್ತಿದ್ದೀರಿ ಎಂದು ಟೀಕಿಸಿದ್ದರು.

ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ ಕಶ್ಯಪ್ ಮಾಡಿದ್ದ ಟ್ವೀಟ್ ಅನ್ನು ತಮಿಳುನಾಡು ಪೊಲೀಸರು ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.

ಘಟನೆಯ ನಂತರ ನಾಲ್ಕು ಸದಸ್ಯರ ಬಿಹಾರ ಸರ್ಕಾರದ ನಿಯೋಗವು ಬುಧವಾರ ಅಧಿಕಾರಿಗಳು ಹಾಗೂ ಕಾರ್ಮಿಕರನ್ನು ಭೇಟಿ ಮಾಡಿ, ನಕಲಿ ವಿಡಿಯೊಗಳ ವಿರುದ್ದ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಗೆ ತನ್ನ ಸಂತೃಪ್ತಿಯನ್ನು ವ್ಯಕ್ತಪಡಿಸಿತು.

ಇದಕ್ಕೂ ಮುನ್ನ ನಿಯೋಗವು ಬಿಹಾರದ ವಲಸೆ ಕಾರ್ಮಿಕರು ಅತ್ಯಧಿಕ ಸಂಖ್ಯೆಯಲ್ಲಿರುವ ತಿರುಪುರ ಹಾಗೂ ಕೊಯಂಬತ್ತೂರಿನಾದ್ಯಂತ ಪ್ರಯಾಣ ಮಾಡಿತ್ತು.

Similar News