ಕುಂದಾಪುರ: ತೋಟಕ್ಕೆ ಬೆಂಕಿ; ಅಪಾರ ನಷ್ಟ
Update: 2023-03-09 19:36 IST
ಕುಂದಾಪುರ, ಮಾ.9: ಮನೆಯೊಂದರ ತೋಟದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ತೀವ್ರ ಸ್ವರೂಪ ಪಡೆದು, ತೋಟದಲ್ಲಿದ್ದ ತೆಂಗು, ಅಡಿಕೆ, ಗೇರು ಮರಗಳು ಬೆಂಕಿಗಾಹುತಿಯಾದ ಘಟನೆ ನಾಡಾ ಗ್ರಾಪಂ ವ್ಯಾಪ್ತಿಯ ಹಲ್ಸಿನಕಟ್ಟೆ ಎಂಬಲ್ಲಿ ಗುರುವಾರ ನಡೆದಿದೆ.
ಇಲ್ಲಿನ ನಿವಾಸಿ ಸ್ಥಳೀಯ ಪಡುಕೋಣೆ ವ್ಯವಸಾಯ ಸಹಕಾರಿ ಸಂಘದಲ್ಲಿ ಉತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದ ಸಾಧು ಎನ್ನುವವರ 4 ಎಕರೆ ತೋಟದಲ್ಲಿ ಮಧ್ಯಾಹ್ನದ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಮಾತ್ರದಲ್ಲಿ 2 ಎಕರೆ ತೋಟದಲ್ಲಿ ಬೆಂಕಿ ವ್ಯಾಪಿಸಿ 20 ತೆಂಗಿನಮರ, 10ಕ್ಕೂ ಅಧಿಕ ಅಡಿಕೆ ಮರ ಸಹಿತ ಬಹಳಷ್ಟು ಗೇರು, ಇತರೆ ಮರಗಳು, ಕಾಳು ಮೆಣಸು ಗಿಡಗಳು, ನೀರಿನ ಪೈಪ್‌ಲೈನ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ಮೌಲ್ಯದ ನಷ್ಟ ಅಂದಾಜು ಮಾಡಲಾಗಿದೆ.
ತೋಟದ ತೆಂಗಿನಕಾಯಿ ಶೆಡ್, ಪಕ್ಕದ ಹಾಡಿಗೂ ಬೆಂಕಿ ವ್ಯಾಪಿಸಿದ್ದು ಸ್ಥಳೀಯರು ಹಾಗೂ ಬೈಂದೂರು ಅಗ್ನಿಶಾಮಕ ದಳ ಆಗಮಿಸಿ ಸಂಪೂರ್ಣ ಬೆಂಕಿ ನಂದಿಸಲಾಗಿದೆ.