×
Ad

ಮಂಗಳೂರು ವಿವಿಯಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ಬಡ್ತಿಯಲ್ಲಿ ವಂಚನೆ: ಕುಲಪತಿ, ಕುಲಸಚಿವರ ವಿರುದ್ಧ ಡಿಎಸ್‌ಎಸ್ ಆರೋಪ

Update: 2023-03-09 20:44 IST

ಮಂಗಳೂರು, ಮಾ. 9: ಮಂಗಳೂರು ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ವಿಭಾಗದ ಹಲವು ತಾಂತ್ರಿಕ ವೃಂದಗಳ ಎಸ್‌ಸಿ, ಎಸ್‌ಟಿ ನೌಕರರಿಗೆ ಕುಲಪತಿ  ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಮತ್ತು ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ ಅವರು ತಮ್ಮ ಸೇವಾವಧಿಯಲ್ಲಿ ಶಾಶ್ವತವಾಗಿ ಬಡ್ತಿ ವಂಚಿಸಿರುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಗೌರವ ಸಲಹೆಗಾರ ಅರುಣ್ ಕುಮಾರ್ ಆರೋಪಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿಫ್ಟ್ ಮೆಕ್ಯಾನಿಕ್ ಹುದ್ದೆಯಲ್ಲಿ ಪರಿಶಿಷ್ಟ ಸಮುದಾಯದ ನೌಕರರ ಸೇವಾವಧಿ ಕಡೆಗಣಿಸಿ ಮುಂಬಡ್ತಿಗೆ ಪರಿಗಣಿಸದೆ ಅವಮಾನ ಮಾಡಲಾಗಿದೆ ಎಂದು  ದೂರಿದರು.

ಎಸ್ಟಿ ಮೀಸಲಾತಿಯಡಿ ನೇಮಕವಾಗಿದ್ದ ಮೇಲ್ವರ್ಗದ ನೌಕರರಿಗೆ ಮುಂಬಡ್ತಿಗೆ ಪರಿಗಣಿಸುವ ಮೂಲಕ ಕಾನೂನು ಬಾಹಿರವಾಗಿ ನಡೆದುಕೊಳ್ಳಲಾಗಿದೆ. ಈ ರೀತಿಯ ಬೆಳವಣಗೆಯನ್ನು ಖಂಡಿಸುವುದಾಗಿ ಹೇಳಿದರು.

ಈ ಪ್ರಕರಣದೊಂದಿಗೆ ಕಳೆದ 15 ವರ್ಷಗಳಿಂದ ವಿವಿಯಲ್ಲಿ ಆಗಿರುವ ಆಕ್ರಮಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಮಂಗಳೂರು ವಿವಿಯಲ್ಲಿ ಕುಲಪತಿಗಳು ಸರಕಾರದ ಅನುಮತಿ ಪಡೆಯದೆ ವಿವಿ ಹಂತದಲ್ಲಿಯೇ 388 ಬೋಧಕೇತರ ಸಿಬ್ಬಂದಿಯನ್ನು ಭರ್ತಿ ಮಾಡಲಾಗಿದೆ. 2021-22ನೆ ಸಾಲಿನಲ್ಲಿ  ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿತರಿಸಲಾದ ಲ್ಯಾಪ್‌ಟಾಪ್  ಖರೀದಿಯಲ್ಲಿ ಕೋಟಿಗಟ್ಟಲೆ ರೂ. ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರ ಬಗ್ಗೆ  ಉನ್ನತ ಮಟ್ಟದ ತನಿಖೆಯಾಗಬೇಕಿದೆ. 50,000 - 60,000 ರೂ. ಬೆಲೆಯ ಲ್ಯಾಪ್‌ಟಾಪ್‌ಗಳಿಗೆ  97,000 -99000 ರೂ. ದರ ನಿಗದಿಪಡಿಸಿ ಕಿಯೋನಿಕ್ಸ್‌ನಿಂದ ಖರೀದಿಸಲಾಗಿದೆ. ಇದರ ಗುಣಮಟ್ಟ ಪರೀಕ್ಷೆಯನ್ನು ಖಾಸಗಿ ಕಾಲೇಜಿನ ಅಧ್ಯಾಪಕರನ್ನು ತಜ್ಞರೆಂದು ಬಿಂಬಿಸಿ ಸರ್ಟಿಫಿಕೇಟ್ ಪಡೆಯುವ ಮೂಲಕ ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ ಅವರು  ಈ ಎಲ್ಲಾ ಅವ್ಯವಹಾರ ಆರೋಪಗಳ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಅರುಣ್ ಕುಮಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಸದಾಶಿವ, ಗಂಗಾಧರ್, ಅಶೋಕ್ ನಾಯಕ್, ಭರತ್ ಕುಮಾರ್ ಉಪಸ್ಥಿತರಿದ್ದರು.

Similar News