ಚಿನ್ನ ಕಳ್ಳಸಾಗಣೆ: ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ಕೊಚ್ಚಿ ಏರ್‌ಪೋರ್ಟ್ ನಲ್ಲಿ ಬಂಧನ
ಹೊಸದಿಲ್ಲಿ,ಮಾ.9: ಚಿನ್ನ ಕಳ್ಳಸಾಗಣೆಯ ಆರೋಪದಲ್ಲಿ ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿಯೊಬ್ಬನನ್ನು ಬುಧವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ವಯನಾಡ್ ನಿವಾಸಿ ಶಫಿ ಎಂದು ಗುರುತಿಸಲಾಗಿದೆ. ಆತನನ್ನು ಕಸ್ಟಮ್ಸ್ ಅಧಿಕಾರಿಗಳು ವಿಮಾನನಿಲ್ದಾಣದಲ್ಲಿ 1487 ಗ್ರಾಂ ಚಿನ್ನದೊಂದಿಗೆ ಬಂಧಿಸಿದ್ದಾರೆ.
ಬಹರೈನ್-ಕೋಝಿಕ್ಕೋಡ್-ಕೊಚ್ಚಿ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿ ವರ್ಗದವರಲ್ಲೊಬ್ಬಾತ ಚಿನ್ನವನ್ನು ತರುತ್ತಿದ್ದಾನೆಂಬ ಮಾಹಿತಿ ಕಸ್ಟಮ್ಸ್ ಪ್ರತಿಬಂಧಕ ಆಯುಕ್ತರಕಚೇರಿಗೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಆರೋಪಿ ಶಫಿಯನ್ನು ಅಧಿಕಾರಿಗಳು ಪ್ರಶ್ನಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಆರೋಪಿಯು ತನ್ನ ಕೈಗಳ ಸುತ್ತಲೂ ಚಿನ್ನವನ್ನು ಸುತ್ತಿಕೊಂಡು, ತೆರಿಗೆ ಪಾವತಿಸುವಂತಹ ಸಾಮಾಗ್ರಿಗಳನ್ನು ಕೊಂಡೊಯ್ಯದ ಪ್ರಯಾಣಿಕರಿಗಾಗಿನ ಆಗಮನ ದ್ವಾರ ‘ಗ್ರೀನ್ ಚಾನೆಲ್’ ಮೂಲಕ ಹಾದು ಹೋಗಲು ಆತ ಯತ್ನಿಸಿದ್ದನೆನ್ನಲಾಗಿದೆ.