ರಂಗದಲ್ಲೇ ಅನ್ನ-ಬಟ್ಟೆ ಕಂಡವರ ಹಾಡುಪಾಡು

Update: 2023-03-10 06:04 GMT

ರಂಗಭೂಮಿಯ ವೈಭವ ಕಂಡಿರುವ 93 ವರ್ಷ ವಯಸ್ಸಿನ ಬೆಳಗಲ್ಲು ವೀರಣ್ಣ ‘‘ಬಾಲ್ಯದಿಂದಲೇ ರಂಗಭೂಮಿ ಕಂಡವನು. ಕಷ್ಟ-ಸುಖ, ಅನ್ನ-ಬಟ್ಟೆ ಕಂಡವನು. ಹೀಗಾಗಿ ರಂಗಭೂಮಿ ದೇವಸ್ಥಾನ. ಅಲ್ಲಿಯ ಸಂಭಾಷಣೆಯೇ ದೇವರ ವಾಕ್ಯ. ಮನುಷ್ಯರನ್ನು ಗುಣವಂತರನ್ನಾಗಿ ಮಾಡುವಂಥದು’’ ಎಂಬ ತೂಕದ ಮಾತಾಡಿದಾಗ ಪ್ರೇಕ್ಷಕರು ತಲೆದೂಗಿದ್ದರು.

‘‘ವೃತ್ತಿ ರಂಗಭೂಮಿ ಉಳಿಯಬೇಕು’’
‘‘ಕಲಾವಿದರು ಬೆಳೆಯಬೇಕು’’
‘‘ಯುವಕರು ವೃತ್ತಿ ರಂಗಭೂಮಿಗೆ ಬರಬೇಕು’’

ಇದು ಬಳ್ಳಾರಿಯಲ್ಲಿ ಕಳೆದ ತಿಂಗಳು (ಫೆಬ್ರವರಿ 25, 26) ನಡೆದ ಕಂಪೆನಿ ನಾಟಕ ಕಲಾವಿದರ ರಾಜ್ಯ ಸಮ್ಮೇಳನದಲ್ಲಿ ಬಹುತೇಕರ ಅಭಿಪ್ರಾಯ ಜೊತೆಗೆ ಒತ್ತಾಯವಾಗಿತ್ತು. ಮುಖ್ಯವಾಗಿ ಅದು ಜಾತ್ರೆಯಾಗಲಿಲ್ಲ. ಕಲಾವಿದರ ಹಾಗೂ ಕಂಪೆನಿ ಮಾಲಕರ ಸಮಾಗಮವಾಗಿತ್ತು. ಪರಸ್ಪರ ಸಂಶಯ, ವೈಷಮ್ಯ ಇರದಿರಲಿ, ವೈಭವದ ಪರಂಪರೆ ಮರುಕಳಿಸಲಿ ಎನ್ನುವ ಸದಾಶಯವಿತ್ತು. ರಂಗಭೂಮಿಯ ವೈಭವ ಕಂಡಿರುವ 93 ವರ್ಷ ವಯಸ್ಸಿನ ಬೆಳಗಲ್ಲು ವೀರಣ್ಣ ‘‘ಬಾಲ್ಯದಿಂದಲೇ ರಂಗಭೂಮಿ ಕಂಡವನು. ಕಷ್ಟ-ಸುಖ, ಅನ್ನ-ಬಟ್ಟೆ ಕಂಡವನು. ಹೀಗಾಗಿ ರಂಗಭೂಮಿ ದೇವಸ್ಥಾನ. ಅಲ್ಲಿಯ ಸಂಭಾಷಣೆಯೇ ದೇವರ ವಾಕ್ಯ. ಮನುಷ್ಯರನ್ನು ಗುಣವಂತರನ್ನಾಗಿ ಮಾಡುವಂಥದು’’ ಎಂಬ ತೂಕದ ಮಾತಾಡಿದಾಗ ಪ್ರೇಕ್ಷಕರು ತಲೆದೂಗಿದರು. ಇಂಥ ಪರಂಪರೆಯನ್ನು ಉಳಿಸಿಕೊಳ್ಳುವ ಕುರಿತು ಹಿರಿಯ ರಂಗ ಕಲಾವಿದರಾದ ಶ್ರೀಧರ ಹೆಗಡೆ ಅವರು ‘‘ಆಡಿದ ನಾಟಕಗಳ ಕುರಿತು ವಿಮರ್ಶಿಸಿಕೊಳ್ಳಬೇಕು. ಹವ್ಯಾಸಿ ಕಲಾವಿದರು ನಾಟಕ ಆಡಿದ ಮರುದಿನ ನಾಟಕ ಕುರಿತು ವಿಮರ್ಶಿಸಿಕೊಳ್ಳುತ್ತಾರೆ. ಹೀಗೆ ಕಂಪೆನಿ ಕಲಾವಿದರು ಆಗಬೇಕು. ವೃತ್ತಿ ರಂಗಭೂಮಿ ಉಳಿಸಿ, ಬೆಳೆಸಬೇಕಾದವರು ಉದಯೋನ್ಮುಖ ಕಲಾವಿದರು. ಇನ್ನು ಕಲಾವಿದರು ಹಗಲಿನಲ್ಲಿ ವಿದ್ಯಾರ್ಥಿಯಾಗಬೇಕು; ರಾತ್ರಿ ಶಿಕ್ಷಕರಾಗಬೇಕು. ತಪ್ಪುಗಳನ್ನು ತಿದ್ದಿಕೊಂಡು ಪರಂಪರೆ ಉಳಿಸಿಕೊಂಡು ಬೆಳೆಸಬೇಕು. ಹಾಲನ್ನು ಮಾರೋಣ. ಈ ಮೂಲಕ ಹಾಲಿನ ರುಚಿ ಹತ್ತಿಸಬೇಕು. ಆದರೆ ಆಲ್ಕೊಹಾಲ್ ಮಾರುವಂತಾಗಬಾರದು. ಸಿನೆಮಾ, ಟಿವಿ ಧಾರಾವಾಹಿಗಳ ಸೆಲೆಬ್ರಿಟಿಗಳನ್ನು ಆಹ್ವಾನಿಸುವುದನ್ನು ನಿಲ್ಲಿಸಬೇಕು’’ ಎಂಬ ಮಾರ್ಮಿಕ ಸಲಹೆ ಮುಂದಿಟ್ಟರು. 

ಆದರೆ ಬಶೀರ್ ತಾಳಿಕೋಟಿ (ರಾಜು ತಾಳಿಕೋಟಿ ಅವರ ಪುತ್ರ) ಅವರು ಬೇರೊಂದು ನಿದರ್ಶನದೊಂದಿಗೆ ಮಾತಿಗೆ ನಿಂತರು. ‘‘ಅನುದಾನ ಪಡೆಯುವುದೊಂದೇ ಉದ್ದೇಶವಾಗಬಾರದು. ಸರಕಾರದ ಅನುದಾನಕ್ಕಾಗಿ ಬೇರೆಯವರಿಗೆ ನಾಟಕ ಆಡಲು ಅವಕಾಶ ಕೊಟ್ಟು ಮಾಲಕರಾದವರು ಮನೆಯಲ್ಲಿ ಕುಳಿತುಕೊಳ್ಳಬಾರದು. ಇಂದಿನ ಯುವಕಲಾವಿದರು ರಂಗಭೂಮಿಯನ್ನು ಶ್ರೀಮಂತಗೊಳಿಸುತ್ತಿಲ್ಲ. ಇದಕ್ಕಾಗಿ ಹಿರಿಯ ಕಲಾವಿದರು ಯುವಕಲಾವಿದರನ್ನು ಬೆಳೆಸಬೇಕು’’ ಎಂದು ಕೋರಿದರು. ಇಂಥದ್ದೇ ಮಾತು ಚಿಂದೋಡಿ ಶ್ರೀಕಂಠೇಶ ಅವರದು ‘‘ಸರಕಾರದ ಅನುದಾನಕ್ಕಾಗಿ ನಾಟಕ ಆಡಿಸುವ ಉದ್ದೇಶ ಇರಬಾರದು. ಕಲಾವಿದರಾದವರು ಕಂಪೆನಿ ಮಾಲಕರನ್ನು ಬಯ್ಯಬಾರದು’’ ಎಂದು ಕಿವಿಮಾತು ಹೇಳಿದರು. 

ಹೀಗೆಯೇ ಹಿರಿಯ ರಂಗ ನಿರ್ದೇಶಕ ಬಿ.ವಿ. ರಾಜಾರಾಂ ಅವರ ಸಲಹೆ ಕೂಡಾ ಗಮನಾರ್ಹ; ‘‘ನಾಟಕದ ಪ್ರಯೋಗಗಳ ಪರಿಣಾಮಗಳ ಕುರಿತು ಯೋಚಿಸಿ. ಕುಟುಂಬವನ್ನು, ಸಮಾಜವನ್ನು ಒಗ್ಗೂಡಿಸುವ ನಾಟಕಗಳಾಗಬೇಕು’’ ಎಂದು ಮಾರ್ಗದರ್ಶನ ಮಾಡಿದರು. 

ಇಂಥ ಮಾತುಗಳೊಂದಿಗೆ ರಂಗ ದೃಶ್ಯಾವಳಿಗಳೂ ಮನರಂಜಿಸಿದವು. ಪ್ರೇಮಾ ಗುಳೇದಗುಡ್ಡ ಅವರು ‘ಕಿತ್ತೂರು ಚೆನ್ನಮ್ಮ’ ನಾಟಕದ ಸಂಭಾಷಣೆ ಹೇಳಿ ಅರವತ್ತೈದರ ವಯಸ್ಸಿನಲ್ಲೂ ಗರ್ಜಿಸಿದರು. ಜೇವರ್ಗಿ ರಾಜಣ್ಣ ಅವರ ‘ಕುಂಟಕೋಣ -2’ ನಾಟಕದ ಕಲಾವಿದರು ರಂಜಿಸಿದರು. ಬಸವರಾಜ ಬೆಂಗೇರಿ ಅವರು ‘ಎಚ್ಚಮ ನಾಯಕ’ ನಾಟಕದ ಎಚ್ಚಮ ನಾಯಕನ ಮಾತುಗಳ ಮೂಲಕ ಗಮನ ಸೆಳೆದರು. ರಂಗಕಲಾವಿದೆ ಕಾವೇರಮ್ಮ ಅವರು ನಲವಡಿ ಶ್ರೀಕಂಠ ಶಾಸ್ತ್ರಿಗಳ ರಚನೆಯ ‘ನಲಿ ನಲಿದಾಡಿ ಮಾಡುವೆ ಧ್ಯಾನ ನಿರಂತರ’ ಹಾಡಿನ ಮೂಲಕ ಸುಭದ್ರಮ್ಮ ಮನ್ಸೂರ ಅವರನ್ನು ನೆನಪಿಸಿದರು. ಹೀಗೆಯೇ ಗದುಗಿನ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ್ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರು ‘ಹೇಮರಡ್ಡಿ ಮಲ್ಲಮ್ಮ’ ನಾಟಕ ಪ್ರಯೋಗಿಸಿದರು. ಇದರಲ್ಲಿ ಮಹಾದೇವ ಹೊಸೂರು ಅವರು ಹೇಮರಡ್ಡಿ ಮಲ್ಲಮ್ಮ ಪಾತ್ರದ ಮೂಲಕ ಸುಭದ್ರಮ್ಮ ಮನ್ಸೂರ ಅವರನ್ನು ನೆನಪಿಸಿದರು. ಅವರ ಸಂಘವು 85 ವರ್ಷಗಳಿಂದ ಇದೇ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. ಮಹಾದೇವ ಹೊಸೂರು ಅವರು 20 ವರ್ಷಗಳಿಂದ ನಿರಂತರವಾಗಿ ಹೇಮರಡ್ಡಿ ಮಲ್ಲಮ್ಮ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. 

ಸಮ್ಮೇಳನದ ಕೊನೆಗೆ ರಂಗತೋರಣದ ಅಧ್ಯಕ್ಷ ಆರ್. ಭೀಮಸೇನ ಅವರು ಎರಡು ನಿರ್ಣಯಗಳನ್ನು ಓದಿದರು; ಅದರಲ್ಲಿ ಮೊದಲನೆಯದು - ‘‘1970ರ ದಶಕದವರೆಗೂ ನೂರಕ್ಕೂ ಮಿಕ್ಕಿ ಸಂಖ್ಯೆಯಲ್ಲಿದ್ದ ವೃತ್ತಿ ಕಂಪೆನಿಗಳು ಮಾಲಕರ ಸಿನೆಮಾ ಆಕರ್ಷಣೆ, ನಟ-ನಟಿಯರಿಗೆ ಸಿನೆಮಾದ ಗೀಳು, ಹಣ ದಾಹದ ಪೈಪೋಟಿ, ವೈಯಕ್ತಿಕ ಕಾರಣಗಳಿಂದ ಕ್ರಮೇಣ ಕ್ಷೀಣಿಸಿ ಈಗ ಕೇವಲ 25-30 ಕಂಪೆನಿಗಳಷ್ಟೇ ಬದುಕಿದ್ದು, ಅದರಲ್ಲೂ ಕೆಲವು ಕಂಪೆನಿಗಳು ನಿತ್ಯ ನಾಟಕ ಪ್ರದರ್ಶನ ನೀಡಲಾರದೆ ಸೊರಗುತ್ತಿವೆ. ಅಷ್ಟಾಗಿಯೂ ಇಂದಿನ ಸಿನೆಮಾ, ಧಾರಾವಾಹಿ, ಕ್ಯಾಸೆಟ್ ಮೊದಲಾದ ಮಾಧ್ಯಮಗಳ ಹಾವಳಿಯ ನಡುವೆಯೂ ಕಂಪೆನಿ ನಾಟಕಗಳು ನಿತ್ಯ ಪ್ರದರ್ಶನ ನೀಡುತ್ತ ಜನಾಕರ್ಷಣೆ, ಜನಾದರ ಉಳಿಸಿಕೊಂಡಿರುವುದು ಪ್ರಶಂಸನೀಯ.’’

‘‘ಝಗಮಗಿಸುವ ಬಣ್ಣದ ಬೆಳಕಿನಲ್ಲಿ ಜನಮನ ರಂಜಿಸುವ ಕಂಪೆನಿ ಕಲಾವಿದರ ಬದುಕು ಅತ್ಯಂತ ಕನಿಷ್ಠ. ಹಾಗೆಯೇ ಹತ್ತಾರು ಕಲಾವಿದರ ಕುಟುಂಬಗಳನ್ನು ಸಾಕಿ ಕಂಪೆನಿ ಮುನ್ನಡೆಸುವ ಮಾಲಕರ ಬವಣೆಯೂ ಹೇಳತೀರದು. ಕಲೆಯೇ ಸರ್ವಸ್ವವೆಂದು ಬದುಕುತ್ತಿರುವ ಕಂಪೆನಿ ಮಾಲಕರ- ಕಲಾವಿದರ ಬೆಂಬಲಕ್ಕೆ ಸರಕಾರಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸ್ಪಂದಿಸುತ್ತಿದ್ದರೂ ಇಬ್ಬರ ಬದುಕೂ ಸಂತಸಕರವಾಗಿಲ್ಲ. ಇದನ್ನು ಮನಗಂಡು ಈ ಸಮ್ಮೇಳನ ಆಯೋಜಿಸಿದ್ದೇವೆ.’’ 

‘‘ನಾಡಿನ ಸಾಂಸ್ಕೃತಿಕ ಲೋಕದ ಮುಕುಟಪ್ರಾಯವಾದ ಕಂಪೆನಿ ನಾಟಕಗಳ ವೈಭವದ ಪರಂಪರೆಯನ್ನು ನಾಡಿನ ಜನತೆ, ಸರಕಾರ, ಇತರ ಸಂಘಸಂಸ್ಥೆಗಳವರು ಗೌರವಿಸಿ, ಉಳಿಸಿ ಬೆಳೆಸಬೇಕೆಂದು ಈ ಸಮ್ಮೇಳನ ಆಗ್ರಹಪೂರ್ವಕ ಒತ್ತಾಯಿಸುತ್ತದೆ.’’ 
ಕೊನೆಗೆ ಬೇಡಿಕೆಗಳನ್ನು ಅವರು ಮುಂದಿಟ್ಟರು. ಅವು;
► ಸರ್ಕಸ್ ಕಂಪೆನಿಯಂತೆ ಹೋದಲ್ಲೆಲ್ಲ ಥಿಯೇಟರ್ ರಚಿಸುವ ಬದಲು ರಾಜ್ಯದ ಪ್ರಮುಖ ನಗರ, ಪಟ್ಟಣ, ಯಾತ್ರಾ ಕೇಂದ್ರ, ಜಾತ್ರಾ ಸ್ಥಳ ಮೊದಲಾದವುಗಳಲ್ಲಿ ಸರಳ ರಂಗಮಂದಿರ ಗಳನ್ನು ಸರಕಾರ ನಿರ್ಮಿಸಿ ಕಂಪೆನಿ ನಾಟಕಗಳಿಗಾಗಿಯೇ ಮೀಸಲಿಡಬೇಕು. 
► ವಿದ್ಯುತ್, ಪೊಲೀಸ್ ಇತ್ಯಾದಿ ಪರವಾನಿಗೆ ಒಂದೇ ಹಂತದಲ್ಲಿ ಅತಿ ಬೇಗನೆ ದೊರೆಯುವಂತಾಗಬೇಕು. ಅಂದರೆ ಏಕಗವಾಕ್ಷಿ ಪದ್ಧತಿ ಜಾರಿಗೊಳ್ಳಬೇಕು.
► ಮಾಲಕರಿಗೆ ಹಾಗೂ ಕಲಾ ವಿದರಿಗೆ ಸರಕಾರ ವಿಮಾ ಸೌಲಭ್ಯ, ಮಾಸಿಕ ಪಿಂಚಣಿ, ಆರೋಗ್ಯ ಭಾಗ್ಯ ಯೋಜನೆಗಳನ್ನು ಕಲ್ಪಿಸಬೇಕು.
► ಕಲಾವಿದರ ಜೀವನ ಅಲೆದಾಟವಾದ್ದರಿಂದ ಪ್ರಮುಖ ನಗರಗಳಲ್ಲಿ ಕಂಪೆನಿ ಕಲಾವಿದರ ಮಕ್ಕಳ ಶಾಲಾ ಶಿಕ್ಷಣಕ್ಕೆ ಸರಕಾರಿ ವಸತಿಶಾಲೆಗಳಲ್ಲಿ ಮೀಸಲು ಕಲ್ಪಿಸಬೇಕು.
► ರೈತ ಮಕ್ಕಳಿಗೆ ದೊರೆಯುವ ವಿದ್ಯಾನಿಧಿ, ಗೃಹಿಣಿಶಕ್ತಿ ಇತ್ಯಾದಿ ಯೋಜನೆಗಳು ಕಂಪೆನಿ ಕಲಾವಿದರಿಗೆ ದೊರೆಯಬೇಕು.
► ಪ್ರಾಕೃತಿಕ ನಷ್ಟಗಳಲ್ಲಿ ವಿಶೇಷ ರಿಯಾಯಿತಿ ತೋರಬೇಕು.
► ಸರಕಾರದ, ಅಕಾಡಮಿಗಳ, ಸರಕಾರಿ ಕಲೆ-ಸಾಹಿತ್ಯ- ಸಂಗೀತ ಟ್ರಸ್ಟ್ಗಳಲ್ಲಿ ಕಂಪೆನಿ ಕಲಾವಿದರ ನೇಮಕ, ಪ್ರಶಸ್ತಿಗಳಿಗೆ ಪರಿಗಣಿಸಬೇಕು.
► ಕಾಯಕಲ್ಪ ಯೋಜನೆಯ ಮೊತ್ತ ಕಂಪೆನಿ ನಿರ್ವಹಣೆಗೆ ಏನೇನೂ ಸಾಲದು. ಅದರ ಸದ್ವಿನಿಯೋಗವಾಗಲು ಸರಕಾರವೇ ಮಾಲಕರಿಗೂ-ಕಲಾವಿದರಿಗೂ ಪ್ರತ್ಯೇಕ ಜೀವ ವಿಮಾ ಇತರ ಭದ್ರತೆಗಳನ್ನು ಒದಗಿಸಬೇಕು. 
► ವೃತ್ತಿ ರಂಗಭೂಮಿ ತರಬೇತಿ ಶಾಲೆ ಅಗತ್ಯ.
► ಪ್ರತೀ ವರ್ಷ ಕನಿಷ್ಠ 15 ಕಂಪೆನಿ ಕಲಾವಿದರಾಗುವ ಯೋಗ್ಯ ತರಬೇತಿ ಹೊಂದಿದವರು ಹೊರಬರುವಂತಾಗಬೇಕು. 
ಇಂಥ ಸಮ್ಮೇಳನಗಳು ಪ್ರತೀ ವರ್ಷ ನಡೆಯುವಂತಾಗಬೇಕು ಎನ್ನುವುದು ಅನೇಕರ ಅಂಬೋಣ. ಇದಕ್ಕೆ ಪುಷ್ಟಿ ನೀಡುವಂತೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ‘‘ಸಾಣೇಹಳ್ಳಿಯಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಸಮಾವೇಶ ಆಯೋಜಿಸುತ್ತೇವೆ’’ ಎಂದು ಭರವಸೆ ನೀಡಿದ್ದಾರೆ. 
ಹೀಗೆ ಎರಡು ದಿನಗಳವರೆಗೆ ಕಲಾವಿದರು ಒಟ್ಟಿಗೆ ಕುಳಿತು ಚಹಾ ಕುಡಿಯುತ್ತ, ಊಟ ಮಾಡುತ್ತ ಕಷ್ಟಸುಖಗಳನ್ನು ಹಂಚಿಕೊಂಡು ಖುಷಿಪಟ್ಟರು. ಇದರಿಂದ ಬಳ್ಳಾರಿ ಬಿಸಿಲಿನ ಪ್ರಖರತೆಯನ್ನೂ ಮರೆತರು.

Similar News

ಜಗದಗಲ
ಜಗ ದಗಲ