ಉಳ್ಳಾಲ ಜುಮಾ ಮಸೀದಿ ಆಡಳಿತ ಸಮಿತಿಗೆ ನಡೆದ ಚುನಾವಣೆ ಕಾನೂನುಬಾಹಿರ: ಹಾಜಿ ಅಬ್ದುಲ್ ರಶೀದ್ ಆರೋಪ

Update: 2023-03-10 11:57 GMT

ಮಂಗಳೂರು: ಉಳ್ಳಾಲ ಜುಮಾ ಮಸೀದಿ ಮತ್ತು ಸೈಯ್ಯದ್ ಶರೀಫುಲ್ ಮದನಿ ದರ್ಗಾ (ಉಳ್ಳಾಲ ದರ್ಗಾ) ಆಡಳಿತ ಸಮಿತಿಗೆ ನಡೆದ ಚುನಾವಣೆಯು ಕಾನೂನುಬಾಹಿರವಾಗಿದೆ ಎಂದು ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಎಲ್ಲಾ ಮತದಾರರನ್ನು ಸೇರಿಸಿಕೊಂಡು ಮುಕ್ತವಾಗಿ ಆಗಿಲ್ಲ. ಕಾನೂನುಬಾಹಿರ ಚುನಾವಣೆ ಆಗಿರುವ ಕಾರಣ ಈ ಚುನಾವಣೆಯನ್ನು ನಾವು ಬಹಿಷ್ಕರಿಸಿರುವುದಾಗಿ ಹೇಳಿದರು.

ಮಾ.8ರಂದು ದ.ಕನ್ನಡ ಜಿಲ್ಲಾ ವಕ್ಫ್  ಅಧಿಕಾರಿಗಳು ಮತ್ತು ಸಲಹಾ ಸಮಿತಿ ಅಧ್ಯಕ್ಷರು ಸ್ವಯಂ ಮುಂದೆ ನಿಂತು ಉಳ್ಳಾಲ ಜುಮಾ ಮಸೀದಿ ಮತ್ತು ಸೈಯ್ಯದ್ ಶರೀಫುಲ್ ಮದನಿ ದರ್ಗಾ (ಉಳ್ಳಾಲ ದರ್ಗಾ) ಆಡಳಿತ ಸಮಿತಿಯೊಂದಿಗೆ ನಡೆದುಕೊಂಡ ರೀತಿ ನಯವಂಚನೆ ಮತ್ತು ವಕ್ಫ್ ಆ್ಯಕ್ಟ್ ನಿಯಮಗಳ  ಉಲ್ಲಂಘನೆಯಾಗಿರುತ್ತದೆ ಎಂದರು.

ನೂತನ ಸಮಿತಿಯನ್ನು ರಚಿಸುವ ಅಧಿಕಾರ ವಕ್ಫ್ ಆ್ಯಕ್ಟ್ ಪ್ರಕಾರ ಊರ್ಜಿತದಲ್ಲಿರುವ ಹಾಲಿ ಆಡಳಿತ ಸಮಿತಿಯದ್ದು ಎಂದು ಗೊತ್ತಿದ್ದರೂ ಸುಳ್ಳು ಕಾರಣ ನೀಡಿ ವಕ್ಫ್ ನಿಯಮಗಳನ್ನು ಗಾಳಿಗೆ ತೂರಿ ನಮ್ಮ ಸಮಿತಿಯನ್ನು ಸ್ವಯಂ ಘೋಷಿತ ಸಮಿತಿ’ ಎಂದು ಹೇಳುತ್ತಿರುವ ವಕ್ಫ್  ಅಧಿಕಾರಿಗಳ ನಿವಿನ  ಹಿಂದೆ ವಕ್ಫ್  ಮಂಡಳಿಯ ರಾಜ್ಯಾಧ್ಯಕ್ಷ ಶಾಫಿ ಸಅದಿ ಒತ್ತಡ ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳ ಷಡ್ಯಂತ್ರ ಕೆಲಸ ಮಾಡಿವೆ ಎಂದು ಆರೋಪಿಸಿದರು.

ದ.ಕ.ಜಿಲ್ಲಾ ವಕ್ಫ್ ಅಧಿಕಾರಿಗಳು ಮತದಾರರ ಪಟ್ಟಿಯನ್ನು ತಯಾರಿಸದೆ ಕೇವಲ 3,526 ಮಂದಿಯ ಸದಸ್ಯತ್ವವನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸುವ ಪ್ರಕ್ರಿಯೆಯ ವಿರುದ್ಧ ನಮ್ಮ ಆಡಳಿತ ಸಮಿತಿ ಈಗಾಗಲೇ ರಾಜ್ಯ ಹೈಕೋರ್ಟ್ ಮತ್ತು ರಾಜ್ಯ ವಕ್ಫ್  ಟ್ರಿಬ್ಯೂನಲ್ ನಲ್ಲಿ ದಾವೆ ಹೂಡಿವೆ. ಈ ದಾವೆಗಳು ಇತ್ಯರ್ಥವಾಗುವ ಮೊದಲೇ ಚುನಾವಣೆ ನಡೆಸಿ, ಅಧಿಕಾರ ಹಸ್ತಾಂತರ ನಡೆಸಲು ಮುಂದಾದದ್ದು ಸಂಶಯಕ್ಕೆಡೆ ಮಾಡಿದೆ ಎಂದು ಹೇಳಿದರು.

ವಕ್ಫ್  ಮಂಡಳಿ ಮತ್ತು ಅದರ ಅಧಿಕಾರಿಗಳಿಗೆ ವಕ್ಫ್  ಮತ್ತು ಬೈಲಾ ನಿಯಮ ಮತ್ತು ಅದರ ಪಾಲನೆಯ ಬಗ್ಗೆ ಹಲವು ಬಾರಿ ಹೇಳಿಕೊಂಡರೂ ಅದನ್ನು ಕಿವಿಗೆ ಹಾಕಿಕೊಳ್ಳದೆ ಒಂದು ಗುಂಪಿನ ಹಿತಕಾಯುವುದನ್ನು ಬಹಿರಂಗವಾಗಿ ನಡೆಸುತ್ತಲೇ ಬಂದಿದ್ದಾರೆ. ಅದರಲ್ಲೂ ಕಳೆದ ಮಾ.8ರಂದು ವಕ್ಫ್  ಅಧಿಕಾರಿಗಳು ಮತ್ತು ವಕ್ಫ್  ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿ ಸ್ಟಾರ್ ನಡೆದುಕೊಂಡಿರುವ ಅತಿರೇಕದ  ವರ್ತನೆ ನಮ್ಮ ಆರೋಪಗಳನ್ನು ಪುಷ್ಠಿಕರಿಸುತ್ತದೆ ಎಂದು ಹೇಳಿದರು. 

ಉಳ್ಳಾಲ  ಸಂಸ್ಥೆಗೆ ಹೊಸ ಬೈಲಾ ಮಾಡಿದ್ದೇವೆ ಎನ್ನುವ ವಕ್ಫ್  ಮಂಡಳಿಗೆ 2018ರ ಸ್ಟೆಪ್ಟೆಂಬರ್ 28 ರಂದು ಕರ್ನಾಟಕ ಉಚ್ಛ ನ್ಯಾಯಾಲಯದ ಅಂದಿನ ನ್ಯಾಯಮೂರ್ತಿ ಜಸ್ಟೀಸ್ ನಾಗರತ್ನರವರು ನೀಡಿದ ತೀರ್ಪನ್ನು ನೆನಪಿಸ ಬಯಸುತ್ತೇವೆ. ನ್ಯಾಯಮೂರ್ತಿಗಳು ಉಳ್ಳಾಲ ಜುಮಾ ಮಸೀದಿ ಮತ್ತು ಸೈಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮತ್ತು ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೂತನ ಮಾದರಿ ಬೈಲಾ ರಚನ ಮಾಡುವಂತೆ ಆದೇಶಿಸಿದ್ದರು. ಆದರೆ ವಕ್ಫ್ ಅಧಿಕಾರಿಗಳು ನಮ್ಮೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಬೈಲಾ ರಚಿಸಿದ್ದಾರೆ ಮತ್ತು ನೂತನ ಬೈಲಾದ ಪ್ರತಿಯನ್ನು ನಮಗೆ ನೀಡಿರಲಿಲ್ಲ. ಈ ಕಾರಣದಿಂದಾಗಿ ಜ.10ರಂದು ನಾವು ಮಾಹಿತಿ ಹಕ್ಕಿನ ಮೂಲಕ ಪಡೆದುಕೊಂಡೆವು ಎಂದರು.

ನೂತನ  ಸಮಿತಿ ರಚಿಸುವ ಅಧಿಕಾರ ಮತ್ತು ಅಧಿಕಾರದ ಹಸ್ತಾಂತರ ಚಾಲ್ತಿಯಲ್ಲಿರುವ ಆಡಳಿತ ಸಮಿತಿಯದ್ದಾಗಿರುತ್ತದೆ. ವಕ್ಫ್ ರಚಿಸಿದ ಹೊಸ ಬೈಲಾದಲ್ಲೂ ಈ ವಿಚಾರ ಇದೆ. ಹಸ್ತಾಂತರ ನಡೆಸುವ ಮೊದಲು ಲಿಖಿತ ಆದೇಶ ಕೊಡಬೇಕೆಂಬ ವಕ್ಫ್ ನಿಯಮಾವಳಿಗಳಿದ್ದರೂ ವಕ್ಫ್ ಕಾಯಿದೆಯ ಕನಿಷ್ಠ ಜ್ಞಾನವೂ ಇಲ್ಲದಂತೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿಗಳು ಗುರುವಾರ ಮಧ್ಯಾಹ್ನ 2:30ಕ್ಕೆ ತಾನು ರಚಿಸಿದ ಸಮಿತಿಗೆ ಅಧಿಕಾರ ಹಸ್ತಾಂತರಿಸಬೇಕೆಂದು ಮೌಖಿಕ ತಾಕೀತು ನೀಡಿದ್ದರು. ಅಧಿಕಾರ ಹಸ್ತಾಂತರ ನಡೆಸುವ ಮುಂಚಿತವಾಗಿ ಲಿಖಿತ ಆದೇಶ ಪತ್ರ ನಮಗೆ ವಕ್ಫ್  ಅಧಿಕಾರಿಗಳು ನೀಡಲಿಲ್ಲ. ಗುರುವಾರ ಸಂಜೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಸಿರುವುದಾಗಿ ಹೇಳಿದ್ದಾರೆ.

ಹೊಸ ಸಮಿತಿಯು  ಗುರುವಾರ ಸಂಜೆ 7ರ ಸುಮಾರಿಗೆ ಬೀಗ ಮುರಿದು ಚಾರಿಟೇಬಲ್ ಕಚೇರಿಯ  ಒಳ ಹೊಕ್ಕು ಸಭೆ ನಡೆಸಿದೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದೇವೆ. ಆದರೆ ಎಫ್‌ಐಆರ್ ದಾಖಲಾಗಿಲ್ಲ. ವಕ್ಫ್ ಅಧಿಕಾರಿಗಳಿಗೂ ಲಿಖಿತ ಮನವಿ ಸಲ್ಲಿಸಿರುವುದಾಗಿ ಅಬ್ದುಲ್ ರಶೀದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಖಜಾಂಚಿ ಯು.ಕೆ. ಇಲ್ಯಾಸ್, ಸಮಿತಿಯ ಸದಸ್ಯರಾದ ಆಸಿಫ್ ಅಬ್ದುಲ್ಲ, ಫಾರೂಕ್ ಉಳ್ಳಾಲ, ಕೆ.ಎನ್.ಮೊಹಮ್ಮದ್ ಉಪಸ್ಥಿತರಿದ್ದರು.

Similar News