×
Ad

ಏಪ್ರಿಲ್‌ನಲ್ಲಿ ನೀರಿನ ಕೊರತೆ ಆತಂಕ: ಉಡುಪಿ ನಗರಸಭೆಯಲ್ಲಿ ಚರ್ಚೆ

"ಬಿಸಿಲ ತಾಪದಿಂದ ಬಜೆಯ ನೀರಿನ ಸಂಗ್ರಹದಲ್ಲಿ ಕುಸಿತ"

Update: 2023-03-10 18:04 IST

ಉಡುಪಿ, ಮಾ.10: ವಿಪರೀತ ಬಿಸಿಲು ಹಾಗೂ ತಾಪಮಾನ ಏರಿಕೆಯಿಂದ ಈ ಬಾರಿ ಉಡುಪಿ ನಗರಕ್ಕೆ ನೀರು ಪೂರೈಸುವ ಸ್ವರ್ಣ ನದಿಯಲ್ಲಿನ ನೀರು ಆವಿಯಾಗುತಿತ್ತಿದ್ದು, ಇದರ ಬಜೆಯಲ್ಲಿನ ನೀರಿನ ಸಂಗ್ರಹ ಕುಸಿಯುತ್ತಿದೆ. ಇದೇ ರೀತಿ ಮುಂದುವರೆದರೆ ಏಪ್ರಿಲ್‌ನಲ್ಲಿ ನೀರು ಖಾಲಿಯಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕವನ್ನು ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳು ವ್ಯಕ್ತಪಡಿಸಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ಕಳೆದ ಒಂದು ವಾರದಿಂದ ಮಿಷನ್ ಕಂಪೌಂಡಿನ 10 ಮನೆಗಳಿಗೆ ನೀರು ಬರುತ್ತಿಲ್ಲ. ನೀರಿನ ಸಮಸ್ಯೆಗೆ ಸಂಬಂಧಿಸಿ ಮೂರು ತಿಂಗಳ ಕಾಲ ಒಬ್ಬರು ಅಧಿಕಾರಿಗಳ ನೇಮಕ ಮಾಡಬೇಕು ಎಂದರು. ಇವರೊಂದಿಗೆ ಟಿ.ಜಿ.ಹೆಗ್ಡೆ ಸೇರಿದಂತೆ ಹಲವು ಸದಸ್ಯರು ಧ್ವನಿಗೂಡಿಸಿದರು.

ವಾರಾಹಿ ಯೋಜನೆಯಿಂದ ಎಲ್ಲ ಕಡೆ ಪೈಪ್‌ಲೈನ್ ಹಾಳಾಗಿ ನೀರಿನ ಸಮಸ್ಯೆ  ಉದ್ಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷರು, ವಿಪರೀತ ಬಿಸಿಲಿನಿಂದ ಈ ಬಾರಿ ಬಜೆಯಲ್ಲಿನ ನೀರು ಆವಿಯಾಗುತ್ತಿದೆ. ಅದಕ್ಕೆ ನೀರು ಪೂರೈಕೆಯಲ್ಲಿ ನಿಯಂತ್ರ ಮಾಡುತ್ತಿದ್ದೇವೆ. ಈ ಸಂಬಂಧ ನೀರು ಬರುತ್ತಿಲ್ಲ ಎಂದು  ಕೊಂಡ ಕೂರು ವಾರ್ಡ್‌ನಿಂದ ದೂರು ಬಂದಿದೆ ಎಂದು ತಿಳಿಸಿದರು.

ಬಜೆಯ ಒಳ ಹರಿವು ಸ್ಥಗಿತ

ಕಾರ್ಕಳದಿಂದ ಶಿರೂರು, ಶಿರೂರಿನಿಂದ ಬಜೆಗೆ ಬರುವ ಸ್ವರ್ಣ ನದಿಯ ಒಳ ಹರಿವು ಸ್ಥಗಿತಗೊಂಡಿದೆ. ಎಲ್ಲ ಕಡೆ ಒಳ ಹರಿವು ಜ.25ಕ್ಕೆ ನಿಂತಿದೆ. ಆದರೆ ಕಳೆದ ವರ್ಷ ಮಾ.9ಕ್ಕೆ ಒಳ ಹರಿವು ಸ್ಥಗಿತಗೊಂಡಿತ್ತು, ಅಂದರೆ ಒಂದೂವರೆ ತಿಂಗಳ ಹಿಂದೆಯೇ ಈ ಬಾರಿ ಒಳ ಹರಿವು ನಿಂತಿದೆ. ಆದರೆ ಪ್ರಸ್ತುತ ನೀರಿನ ಸಮಸ್ಯೆ ಇಲ್ಲ. ಆದರೆ ಕಂಟ್ರೋಲ್ ಮಾಡದಿದ್ದರೆ ಎಪ್ರಿಲ್‌ನಲ್ಲಿಯೇ ನೀರು ಖಾಲಿಯಾಗಬಹುದು ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ ಪ್ರಭು ಆತಂಕ ವ್ಯಕ್ತಪಡಿಸಿದರು.

ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಳೆದ ವರ್ಷ ಬಜೆಯಲ್ಲಿ 5.9ಮೀಟರ್ ನೀರಿನ ಸಂಗ್ರಹ ಇದ್ದರೆ, ಈ ವರ್ಷ 6.10 ಮೀಟರ್ ನಷ್ಟು ಇದೆ.  ನಾವು ಈಗ ಕೊಡುವ ಪ್ರಕಾರ ನೀರು ಪೂರೈಕೆ ಮಾಡಿದರೆ ಮೇ 16ರವರೆಗೆ ಈ ನೀರಿನ ಸಂಗ್ರಹ ಸಾಕಾಗುತ್ತದೆ. ಕಳೆದ ಒಂದು ವಾರದಿಂದ ಬಿಸಿಲು ಜಾಸ್ತಿಯಾಗಿ ನೀರು ಆವಿಯಾಗುತ್ತಿದೆ. ಇದರಿಂದ ನೀರಿನ ಸಂಗ್ರಹ ಪ್ರಮಾಣ ಕುಸಿಯುತ್ತಿದೆ. ಅದಕ್ಕಾಗಿ ನಿಂಯತ್ರಣ ಮಾಡಲು ಕಳೆದ ಮೂರು ದಿನಗಳಿಂದ ಪ್ರಯತ್ನ ಮಾಡುತ್ತಿದೆ. ಇದರಿಂದ ಕೆಲವು ಎತ್ತರ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಅದನ್ನು ಕೆಲವು ದಿನಗಳಲ್ಲಿ ಸರಿ ಮಾಡುತ್ತೇವೆ ಎಂದು ತಿಳಿಸಿದರು.

ಕುಡಿಯುವ ನೀರು ದುವಾರ್ಸನೆ

ಡ್ರೈನೇಜ್ ಸಮಸ್ಯೆಯಿಂದ ಕಲ್ಮಾಡಿ ವಾರ್ಡ್‌ನ ಕೆಲವು ಮನೆಗಳ ನೀರುಗಳು ದುರ್ವಾಸೆ ಬೀರುತ್ತಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಸದಸ್ಯ ಸುಂದರ್ ಕಲ್ಮಾಡಿ ಒತ್ತಾಯಿಸಿದರು. ಗೋಪಾಲಪುರದಲ್ಲಿ ಸಿಂಗಲ್‌ಲೇ ಔಟ್‌ಗೆ ನಿಯಮ ಮೀರಿ ಅಕ್ರಮವಾಗಿ ಕಾಂಪೌಂಡ್ ನಿರ್ಮಾಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂದು ಸದಸ್ಯರಾದ ಪ್ರಭಾಕರ್ ಪೂಜಾರಿ ಆರೋಪಿಸಿದರು.

ಉಡುಪಿ ನಗರದ ವೃತ್ತಕ್ಕೆ ಮೊಗವೀರ ಸಮುದಾಯದ ಕುಲಗುರು ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಹೆಸರು ಇಟ್ಟು, ಪುತ್ಥಳಿ ನಿರ್ಮಿಸುವಂತೆ ರಮೇಶ್ ಕಾಂಚನ್ ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕ ರಘುಪತಿ ಭಟ್, ಇದಕ್ಕೆ ಸೂಕ್ತ ವೃತ್ತ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ತ್ಯಾಜ್ಯ ಸಂಗ್ರಹದ ಹಣ ಬಾಕಿ

ಸುಸ್ಥಿತಿಯಲ್ಲಿದ್ದ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪ ಕಾಂಕ್ರೀಟ್ ರಸ್ತೆಯನ್ನು ಅಗೆದಿರುವುದರ ವಿರುದ್ಧ ನಿತ್ಯಾನಂದ ಒಳಕಾಡು ಪ್ರತಿಭಟನೆ ನಡೆಸಿರುವ ವಿಚಾರವನ್ನು ರಮೇಶ್ ಕಾಂಚನ್ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು, ಇದು 25ವರ್ಷಗಳ ಹಿಂದೆ ರಸ್ತೆಯಾಗಿದ್ದು, ಅಗಲೀಕರಣ ಮಾಡುವುದು ಅನಿವಾರ್ಯವಾಗಿತ್ತು. ಈ ಬಗ್ಗೆ ಅಧಿಕಾರಿಗಳು ನಿತ್ಯಾನಂದ ಒಳಕಾಡು ಅವರಿಗೆ ಮನವರಿಕೆ ಮಾಡಿ ಕಾಮಗಾರಿ ಮುಂದುವರೆಸ ಬೇಕು ಎಂದು ತಿಳಿಸಿದರು.

ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಸ್ವಸಹಾಯ ಸಂಘವು ಮಾಸಿಕ ಶುಲ್ಕ 36 ಲಕ್ಷ ರೂ. ಬಾಕಿ ಇರಿಸಿದ್ದು, ಇದನ್ನು ಮನ್ನಾ ಮಾಡುವ ವಿಷಯಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ತ್ಯಾಜ್ಯ ಸಂಗ್ರಹಕ್ಕೆ ಸಂಬಂಧಿಸಿ ಪ್ರತಿ ಮನೆಯಿಂದಲೂ ಶುಲ್ಕ ಸಂಗ್ರಹಿಸುತ್ತಾರೆ. ನಗರಸಭೆ ಬಾಕಿ ಶುಲ್ಕವನ್ನು ಪಾವತಿಸಲೇ ಬೇಕು ಎಂದು ಒತ್ತಾಯಿಸಿದರು.

ಎಲ್ಲೆಂದರಲ್ಲಿ ರಸ್ತೆ ಅಗೆತಕ್ಕೆ ಆಕ್ರೋಶ

ಖಾಸಗಿ ಕೇಬಲ್ ಸಂಸ್ಥೆ, ವಾರಾಹಿ ಕಾಮಗಾರಿಗಾಗಿ ನಗರದಲ್ಲಿ ಕೆಲವು ರಸ್ತೆ ಅಗೆಯಲಾಗುತ್ತಿದೆ. ಈ ಮೂಲಕ ಸುಸ್ಥಿತಿಯಲ್ಲಿದ್ದ ರಸ್ತೆಯನ್ನು ಹಾಳು ಮಾಡ ಲಾಗುತ್ತಿದೆ ಎಂದು ವಿಪಕ್ಷ ನಾಯಕ ರಮೇಶ್ ಕಾಂಚನ್, ಅಮೃತಾ ಕೃಷ್ಣಮೂರ್ತಿ, ಗಿರೀಶ್ ಅಂಚನ್ ಸಭೆಯಲ್ಲಿ ದೂರಿದರು.

ಯಾವುದೇ ಕಾರಣಕ್ಕೂ ರಸ್ತೆ ಅಗೆಯಲು ಬಿಡಬಾರದು. ಕೆಲಸ ಮುಗಿದ ಬಳಿಕ ರಸ್ತೆಯ ಕೆಲಸ ಪೂರ್ಣಗೊಳಿಸದೆ ಅರ್ಧಕ್ಕೆ ಬಿಟ್ಟು ಹೋಗುವುದು ಸರಿಯಲ್ಲ ಎಂದು ಅವರು ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಪೌರಾಯುಕ್ತರು ಹೇಳಿದರು.

ಬೀಚ್‌ನಲ್ಲಿ ಶೌಚಾಲಯಕ್ಕೆ 10ರೂ.!

ಮಲ್ಪೆ ಬೀಚ್‌ನಲ್ಲಿ ಶೌಚಾಲಯಕ್ಕೆ ಪ್ರವಾಸಿಗರಿಂದ 10ರೂ. ಪಡೆದುಕೊಳ್ಳಲಾಗುತ್ತಿದೆ ಎಂದು ರಮೇಶ್ ಕಾಂಚನ್ ಸಭೆಯಲ್ಲಿ ಆರೋಪಿಸಿದರು.

ಈ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕ ರಘುಪತಿ ಭಟ್, ಬೀಚ್‌ನಲ್ಲಿರುವ ಶೌಚಾಲಯದಲ್ಲಿ ಸ್ನಾನಕ್ಕೆ ಪ್ರವಾಸಿಗರಿಂದ 10ರೂ. ಪಡೆದುಕೊಳ್ಳಲಾಗುತ್ತಿದೆಯೇ ಹೊರತು ಬೇರೆ ಯಾವುದಕ್ಕೂ ಪಡೆದುಕೊಳ್ಳುತ್ತಿಲ್ಲ ಎಂದು ತಿಳಿಸಿದರು.

Similar News