ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಆತ್ಮಹತ್ಯೆ ಪ್ರಕರಣ: ಯಶ್ಪಾಲ್ ಸುವರ್ಣ ಬಂಧನಕ್ಕೆ ಸಿಪಿಎಂ ಆಗ್ರಹ
Update: 2023-03-10 21:18 IST
ಉಡುಪಿ, ಮಾ.10: ಮಲ್ಪೆ ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಸುಬ್ಬಣ್ಣ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿರುವ ಸೊಸೈಟಿಯ ಅಧ್ಯಕ್ಷ ಯಶ್ಪಾಲ್ ಸುವರ್ಣ ಮತ್ತಿತರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಯಶ್ಪಾಲ್ ಸುವರ್ಣ ಮತ್ತು ಇತರರು ಸುಬ್ಬಣ್ಣ ಅವರಿಗೆ ಮಾನಸಿಕ ಹಿಂಸೆ ನೀಡಿ ಅವರ ಸಾವಿಗೆ ಕಾರಣರಾಗಿದ್ದಾರೆಂದು ದೂರಿನಲ್ಲಿ ಆಪಾದಿಸಲಾಗಿದೆ. ಸುವರ್ಣರು ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಡೆತ್‌ನೋಟ್ ಮೊದಲಾದ ದಾಖಲೆ ನಾಶದ ಸಾಧ್ಯತೆ ಇರುವುದರಿಂದ ಅವರನ್ನು ಬಂಧಿಸಿದರೆ ಮಾತ್ರ ನಿಷ್ಪಕ್ಷಪಾತ ತನಿಖೆ ಸಾಧ್ಯವಾಗುತ್ತದೆ. ಆದ್ದರಿಂದ ಪೊಲೀಸ್ ಅಧಿಕಾರಿಗಳು ಕೂಡಲೇ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.