ಉಡುಪಿ ಜಿಲ್ಲಾ ನರ್ಸರಿಮೆನ್ ಸಂಘ ಉದ್ಘಾಟನೆ
ಉಡುಪಿ: ನೂತನವಾಗಿ ಅಸ್ತಿತ್ವಕ್ಕೆ ಬಂದ ಉಡುಪಿ ಜಿಲ್ಲ ನರ್ಸರಿಮೆನ್ ಅಸೋಸಿಯೇಷನ್‌ನ್ನು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಗುರುವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭೂಮಿಯ ಮೇಲೆ ಗಿರಿ, ನದಿ, ಗಿಡಮರಗಳು ಇರುವವರೆಗೆ ಮಾನವ ಸಂತತಿ ಉಳಿದಿರುತ್ತದೆ. ಈ ಕುರಿತಂತೆ ಮಕ್ಕಳಿಗೆ ಪರಿಸರದ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಪೇಜಾವರಶ್ರೀಗಳು ಹೇಳಿದರು.
ಬದುಕಿಗೆ ಅತ್ಯಗತ್ಯವಾಗಿ ಬೇಕಾಗಿರುವ ಪ್ರಾಣವಾಯು ಗಿಡಮರಗಳಿಂದ ಮಾತ್ರ ಲಭ್ಯವಾಗುತ್ತದೆ. ಹೀಗಾಗಿ ಗಿಡಮರಗಳನ್ನು ಪ್ರತಿನಿತ್ಯ ಪೋಷಣೆ ಮಾಡಬೇಕಾಗಿದೆ. ಇಂದು ಕೃಷಿಭೂಮಿಯೊಂದಿಗೆ ಮರಗಿಡಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚರಗೊಳ್ಳಬೇಕು ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಶಾಸಕ ಕೆ.ರಘುಪತಿ ಭಟ್ ಅವರು ಸಂಘದ ಲಾಂಛನವನ್ನು ಬಿಡುಗಡೆಗೊಳಿಸಿದರು.
ಉಡುಪಿ ಜಿಲ್ಲಾ ಬಿಲ್ಡರ್ ಅಸೋಸಿಯೇಷನ್‌ನ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉದ್ಯಮಿ ಹಾಗೂ ಕಾಪು ಗುರ್ಮೆ ಫೌಂಡೇಷನ್‌ನ ಪ್ರವರ್ತಕ ಸುರೇಶ್ ಶೆಟ್ಟಿ ಗುರ್ಮೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಬ್ರಹ್ಮಾವರ ಕೆವಿಕೆ ಮುಖ್ಯಸ್ಥ ಡಾ.ಧನಂಜಯ, ತೋಟಗಾರಿಕಾ ವಿಜ್ಞಾನಿ ಚೈತನ್ಯ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನರ್ಸರಿ ಕ್ಷೇತ್ರದಲ್ಲಿ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ನೂತನ ಸಂಘದ ಅಧ್ಯಕ್ಷ ಸುರೇಶ್ ಸುವರ್ಣ ಕುರ್ಕಾಲು ಸ್ವಾಗತಿಸಿದರೆ, ಉಪಾಧ್ಯಕ್ಷ ಕೆ.ಶ್ಯಾಮ್‌ಪ್ರಸಾದ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವ ಸಲಹೆಗಾರ ಬಾಸುಮ ಕೊಡಗು ಕಾರ್ಯಕ್ರಮ ನಿರೂಪಿಸಿದರು.