ಟೋಲ್ ದರ ಹೆಚ್ಚಳ ವಿರುದ್ಧ ಹೋರಾಟದ ಅಲೆ ಎದ್ದು ಬರಬೇಕು: ಮುನೀರ್ ಕಾಟಿಪಳ್ಳ

Update: 2023-03-10 17:15 GMT

ಮಂಗಳೂರು: ಎಪ್ರಿಲ್ ಒಂದರಿಂದ ದೇಶದ್ಯಾಂತ ಟೋಲ್ ದರ ಹೆಚ್ಚಳಗೊಳ್ಳುತ್ತಿದ್ದು, ಇದರ ವಿರುದ್ಧ ಹೋರಾಟದ ಅಲೆ ಎದ್ದು ಬರಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ತೆರವುಗೊಂಡು 100 ದಿನ ಪೂರ್ತಿಗೊಂಡಿದೆ. ಎಪ್ರಿಲ್ ಒಂದರಿಂದ ದೇಶದ್ಯಾಂತ ಟೋಲ್ ದರ ಹೆಚ್ಚಳಗೊಳ್ಳುತ್ತಿದೆ. ಟೋಲ್ ಅನ್ನುವುದು ಕಾನೂನು ಬದ್ಧ ದರೋಡೆ. ಈ ಕುರಿತು ಎಲ್ಲೆಡೆ ಹೋರಾಟದ ಅಲೆ ಎದ್ದು ಬರಬೇಕು. ಸುರತ್ಕಲ್ ಟೋಲ್ ತೆರವು ಹೋರಾಟದ ಗೆಲುವು ಅದಕ್ಕೊಂದು ಮಾದರಿ‌ ಎಂದು ಹೇಳಿದ್ದಾರೆ.

ಸುರತ್ಕಲ್ ಟೋಲ್ ಸಂಗ್ರಹ ರದ್ದುಗೊಂಡು 100 ದಿನ ಸಂದರೂ ಉಡುಪಿ, ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ಸುಗಳಲ್ಲಿ‌ ಟೋಲ್ ತೆರಿಗೆ ಸಂಗ್ರಹ ಇನ್ನೂ ಕೈ ಬಿಟ್ಟಿಲ್ಲ. ಬಸ್ಸು ಪ್ರಯಾಣಿಕರು ಈಗಲೂ ಟೋಲ್ ದರ ಪಾವತಿಸುತ್ತಿದ್ದಾರೆ. ಅದು ಬಸ್ಸು ಮಾಲಕರ ಜೇಬು ಸೇರುತ್ತಿದೆ. ಪ್ರತಿ ದಿನ ಸರಾಸರಿ ಎರಡು ಲಕ್ಷ ರೂ. ಈ ರೀತಿ ಬಸ್ಸು ಮಾಲಕರು ಸಂಗ್ರಹಿಸುತ್ತಿದ್ದಾರೆ. ಇದು ನೈತಿಕವಾಗಿಯೂ, ಕಾನೂನು ಪ್ರಕಾರವೂ ಸರಿಯಲ್ಲ. ಬಸ್ಸು ಮಾಲಕರೇ ಸ್ವತಹ ಟಿಕೆಟ್ ಮೇಲಿನ ಟೋಲ್ ಸೆಸ್ ಕೈಬಿಡಬೇಕಿತ್ತು. ಇಲ್ಲಾ, ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕಿತ್ತು. ಎರಡೂ ಜಿಲ್ಲೆಯ ಜಿಲ್ಲಾಡಳಿತ ಮೌನ ವಹಿಸಿದೆ. ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಇಲ್ಲಿ ಇಂತದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರೇ ಮತ್ತೆ ಹೋರಾಟ ನಡೆಸಬೇಕಾಗಿದೆ. ನಾವು ಹೋರಾಟ ನಡೆಸಿದ್ದು ವಾಹನ ಸವಾರರಿಗೆ, ಪ್ರಯಾಣಿಕರಿಗೆ ಟೋಲ್ ಸುಲಿಗೆಯಿಂದ ಮುಕ್ತಿ ಸಿಗಬೇಕು ಎಂದು. ಮಧ್ಯದಲ್ಲಿ ಇರುವವರು ಲಾಭ ಪಡೆಯಲಿ ಎಂದಲ್ಲ‌‌ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Similar News