ಉಳ್ಳಾಲ ದರ್ಗಾ ಆಡಳಿತ ಮಂಡಳಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ: ಯು.ಟಿ ಖಾದರ್ ಸ್ಪಷ್ಟನೆ

''ಪುರಾವೆ ಒದಗಿಸಿದರೆ ರಾಜಕೀಯದಿಂದಲೇ ನಿವೃತ್ತಿ''

Update: 2023-03-11 08:25 GMT

ಮಂಗಳೂರು, ಮಾ.11: ಉಳ್ಳಾಲ ದರ್ಗಾ ಆಡಳಿತ ಮಂಡಳಿಯ ವಿಚಾರದಲ್ಲಿ ತಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ವಕ್ಫ್ ಮಂಡಳಿಗೆ ಒತ್ತಡವನ್ನೂ ಹೇರಿಲ್ಲ. ಒಂದು ವೇಳೆ ಹಸ್ತಕ್ಷೇಪ ಮಾಡಿರುವ ಬಗ್ಗೆ ಪುರಾವೆ ಒದಗಿಸಿದರೆ ತಾನು ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಮಾಜಿ ಸಚಿವ, ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಸಮಸ್ತ ಅಧ್ಯಕ್ಷ ಜಿಫ್ರಿ ‌ಮುತ್ತುಕೋಯ ತಂಙಳ್ ನೀಡಿದ್ದ ಹೇಳಿಕೆಯ ಬಗ್ಗೆ "ವಾರ್ತಾಭಾರತಿ"ಗೆ ಪ್ರತಿಕ್ರಿಯೆ ನೀಡಿದ ಅವರು "ಸಮಸ್ತದ ಜಿಫ್ರಿ‌ ಮುತ್ತುಕೋಯ ತಂಙಳ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಯಾರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ. ಆದರೆ ಅವರ ಹೇಳಿಕೆಯು ನನ್ನ ಬಗ್ಗೆಯಾಗಿದೆ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಅದನ್ನು ನಿವಾರಿಸಲು ತಾನು ಸ್ಪಷ್ಡನೆ ನೀಡುವುದು ಅನಿವಾರ್ಯವಾಗಿದೆ. ನಾನು ರಾಜಕೀಯ ಜೀವನದಲ್ಲಿ ಯಾವತ್ತೂ ಅಧಿಕಾರ ದುರುಪಯೋಗಪಡಿಸಿಲ್ಲ. ಸಮಾಜ, ಸಮುದಾಯ, ಸಂಘಟನೆ, ಧರ್ಮ, ಜಾತಿ, ಪಕ್ಷಗಳ ಮಧ್ಯೆ ಒಡಕು ಸೃಷ್ಟಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

''ಎಲ್ಲರನ್ನೂ ಸಮಾನವಾಗಿ ಕಂಡಿರುವೆ ಮತ್ತು ಸರ್ವರನ್ನೂ ಒಗ್ಗೂಡಿಸಲು ಪ್ರಯತ್ನಿಸಿರುವೆ. ಆದರೆ ನನ್ನ ಯಶಸ್ಸನ್ನು ಸಹಿಸದ ಕೆಲವರು ಸಮಸ್ತದ ಅಧ್ಯಕ್ಷರಿಗೆ ತಪ್ಪು ಮಾಹಿತಿ ನೀಡಿರಬೇಕು. ಅದರಂತೆ ಅವರು ಆ ಸಭೆಯಲ್ಲಿ  ಮಾತನಾಡಿರಬಹುದು. ತಾನು ಉಳ್ಳಾಲ ದರ್ಗಾ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರುವೆನೆಂದು ಒಂದೋ ಆಗಿನ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಬೇಕಿತ್ತು. ಅದು ಬಿಟ್ಟು ಇತರರು ಈ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ'' ಎಂದಿದ್ದಾರೆ.

ಶೀಘ್ರ ತಾನು ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್ ಅವರನ್ನು ಭೇಟಿ ಮಾಡಿ ವಾಸ್ತವ ವಿಚಾರ ಮನವರಿಕೆ ಮಾಡಿಕೊಡುವೆ ಎಂದ ಯು.ಟಿ.ಖಾದರ್, ದರ್ಗಾ ಆಡಳಿತದಲ್ಲಿ ತಾನು ಹಸ್ತಕ್ಷೇಪ ಮಾಡಿರುವ ಬಗ್ಗೆ ಪುರಾವೆ ಒದಗಿಸಿದರೆ ರಾಜಕಾರಣದಿಂದಲೇ ದೂರ ಸರಿಯುವೆ ಎಂದು ಸ್ಪಷ್ಟಪಡಿಸಿದ್ದಾರೆ.

Similar News