ಅದಾನಿ ಫೌಂಡೇಷನ್‌ನ ವತಿಯಿಂದ 755 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ
ಕಾಪು, ಮಾ.11: ಅದಾನಿ ಫೌಂಡೇಷನ್‌ನ ವತಿಯಿಂದ ಯುಪಿಸಿಎಲ್ ಸ್ಥಾವರದ ಸುತ್ತಮುತ್ತಲಿನ 12ಗ್ರಾಪಂ ವ್ಯಾಪ್ತಿಯಲ್ಲಿ ನೆಲೆಸಿರುವ 755 ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 20 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವನ್ನು ಪಡುಬಿದ್ರಿಯ ಬಂಟರ ಭವನದಲ್ಲಿ ಇಂದು ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಮಾತನಾಡಿ, ಅದಾನಿ ಯುಪಿಸಿಎಲ್ ಸಂಸ್ಥೆಯ ಸಿಎಸ್‌ಆರ್ ಯೋಜನೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆದು, ಸಮಾಜದ ಬೆಳವಣಿಗೆಗೆ ತಾವೂ ಸಹ ಕೊಡುಗೆಯನ್ನು ನೀಡಬೇಕು ಎಂದು ತಿಳಿಸಿದರು.
ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, 2021-22ನೇ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ, ಪಿ.ಯು.ಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸ್ಥಾವರದ ನೆರೆ ಪಂಚಾಯತ್‌ಗಳ ಮೂಲಕ ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಎಲ್ಲೂರು ಗ್ರಾಪಂ ಅಧ್ಯಕ್ಷ ಜಯಂತ ಕುಮಾರ್, ಪಡುಬಿದ್ರಿ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ, ತೆಂಕ ಗ್ರಾಪಂ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಬಡಾ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಪಲಿಮಾರು ಗ್ರಾಪಂ ಅಧ್ಯಕ್ಷೆ ಗಾಯತ್ರಿ ಪ್ರಭು, ಬಳಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ದಿವಾಕರ್ ಪೂಂಜಾ, ಮಜೂರು ಗ್ರಾಪಂ ಅಧ್ಯಕ್ಷೆ ಶರ್ಮೀಳಾ, ಕುತ್ಯಾರು ಗ್ರಾಪಂ ಅಧ್ಯಕ್ಷ ಲತಾ ಎಸ್.ಆಚಾರ್ಯ, ಬೆಳಪು ಗ್ರಾಪಂ ಅಧ್ಯಕ್ಷೆ ಶೋಭಾ ಭಟ್, ಮುದರಂಗಡಿ ಗ್ರಾಪಂ ಅಧ್ಯಕ್ಷೆ ಯೋಗಿನಿ ಶೆಟ್ಟಿ, ಇನ್ನಾ ಗ್ರಾಪಂ ಉಪಾಧ್ಯಕ್ಷೆ ಸರೀತಾ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಯುಪಿಸಿಎಲ್ ಕಂಪನಿಯ ಡಿಜಿಎಂ ರವಿ ಆರ್.ಜೇರೆ ಸ್ವಾಗತಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅದಾನಿ ಫೌಂಡೇಷನ್ ಸಿಬ್ಬಂದಿ ಅನುದೀಪ್ ಪೂಜಾರಿ, ಶುಭ ಮಂಗಳ ಎರ್ಮಾಳ್, ಯಶವಂತ್ ಆಂಚನ್, ಸುಭಾಷ್, ದೇವಾನಂದ, ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.