×
Ad

ಕೇಂದ್ರ ಸಾಹಿತ್ಯ ಅಕಾಡಮಿಯ ಕೊಂಕಣಿ ಭಾಷಾ ಮುಖ್ಯಸ್ಥರಾಗಿ ಮಂಗಳೂರು ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಆಯ್ಕೆ

Update: 2023-03-11 19:06 IST

ಮಂಗಳೂರು, ಮಾ.11: ಕೊಂಕಣಿ ಕವಿ, ಕವಿತಾ ಟ್ರಸ್ಟ್‌ನ ಸ್ಥಾಪಕ ಕರಾವಳಿ ಮೂಲದ ಕವಿ ಮೆಲ್ವಿನ್ ರೊಡ್ರಿಗಸ್ ಕೇಂದ್ರ ಸಾಹಿತ್ಯ ಅಕಾಡಮಿಯ ಕೊಂಕಣಿ ಭಾಷೆಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

ಸಂವಿಧಾನದ ಎಂಟನೆ ಪರಿಚ್ಚೇದದಲ್ಲಿ ಮಾನ್ಯತೆ ಪಡೆದಿರುವ ಭಾರತದ ಎಲ್ಲಾ ಭಾಷೆಗಳ ಸುಮಾರು 99 ಪ್ರತಿನಿಧಿಗಳು ಭಾಗವಹಿಸಿದ್ದ ಸಾಹಿತ್ಯ ಅಕಾಡಮಿಯ ಜನರಲ್ ಕೌನ್ಸಿಲ್ ಸಭೆಯಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ಕೊಂಕಣಿ ಭಾಷೆಯ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಕರ್ನಾಟಕಕ್ಕೆ ಮೊದಲ ಬಾರಿಗೆ ಈ ಮನ್ನಣೆ ಪ್ರಾಪ್ತವಾಗಿದೆ. ಮುಂದಿನ 5  ವರ್ಷಗಳ ಅವಧಿಗೆ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡಮಿಯಲ್ಲಿ ಈ ಹುದ್ದೆ ಯಲ್ಲಿ ಮುಂದುವರೆಯಲಿದ್ದಾರೆ.

ಈ ವರ್ಷದ ಜನವರಿಯಲ್ಲಿ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡಮಿಯ ಜನರಲ್ ಕೌನ್ಸಿಲ್‌ಗೆ ಆಯ್ಕೆಯಾ ಗಿದ್ದರು. ಉದ್ಯಮ ನಿರ್ವಹಣೆಯಲ್ಲಿ ಸ್ನಾತಕ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಕವಿ ಮೆಲ್ವಿನ್ ರೊಡ್ರಿಗಸ್ ಪ್ರಸ್ತುತ ಮಂಗಳೂರಿನ ದೈಜಿವಲ್ಡ್ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ.

ಕವಿತಾ ಟ್ರಸ್ಟ್ ಸ್ಥಾಪಕರಾಗಿರುವ ಮೆಲ್ವಿನ್ ರೊಡ್ರಿಗಸ್ ಈವರೆಗೆ ಕೊಂಕಣಿ ಕಾವ್ಯಕ್ಕೆ ಸಂಬಂಧಿಸಿದಂತೆ ಸುಮಾರು 220  ಕಾರ್ಯಕ್ರಮ, 34 ಪುಸ್ತಕಗಳನ್ನೂ ಬರೆದಿದ್ದಾರೆ. 6 ಕವನ ಸಂಕಲನಗಳು, 2 ಪ್ರಬಂದ ಸಂಕಲನಗಳು, 1 ಕೊಂಕಣಿ ಹಾಡುಗಳ ದ್ವನಿಸುರುಳಿ, 3  ಭಾಷಾಂತರ ಕೃತಿಗಳು, 6 ಸಂಪಾದಿತ ಕೃತಿಗಳು, 1 ನೀಳ್ಗತೆಯನ್ನು ಕೂಡ ರಚಿಸಿದ್ದಾರೆ.

ಗೋವಾದ ಕಾಣಕೋಣದಲ್ಲಿ 2019ರಲ್ಲಿ ನಡೆದ 24ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದ ಅವರು, ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಕೇಂದ್ರದ ವಿಶ್ವಸ್ಥರೂ ಆಗಿರುತ್ತಾರೆ.  

ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡಮಿಯಿಂದ ಗೌರವ ಪುರಸ್ಕಾರ ಸೇರಿದಂತೆ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿ, ದೊಹಾ ಕತರ್ ಎಂಸಿಎ ಕಲಾ ಪುರಸ್ಕಾರ, ದಾಯ್ಜಿ ದುಬಯ್ ಸಾಹಿತ್ಯ ಪುರಸ್ಕಾರ ಹಾಗೂ ಕೊಂಕಣಿ ಕುಟಮ್, ಬ್ರಾಹೇಯ್ನ್ ಪುರಸ್ಕಾರಗಳಿಗೆ  ಭಾಜನರಾಗಿದ್ದಾರೆ. ಅವರ ಸಾಹಿತ್ಯ ಕೃತಿಗಳಿಗೆ ಸಾಹಿತ್ಯ ಅಕಾಡಮಿ ದೆಹಲಿ ಪ್ರಶಸ್ತಿ,  ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ,  ಮಣಿಪಾಲದ ಟಿ.ಎಂ.ಎ. ಪೈ ಪುಸ್ತಕ ಪುರಸ್ಕಾರಗಳು ಪ್ರಾಪ್ತವಾಗಿವೆ.

Similar News