ತಮಿಳುನಾಡಿನಲ್ಲಿ ವಲಸಿಗರ ಮೇಲಿನ ದಾಳಿ ವೀಡಿಯೊ ನಕಲಿ: ಬಿಹಾರ್ ಅಧಿಕಾರಿಗಳ ಪ್ರತಿಪಾದನೆ

Update: 2023-03-11 17:16 GMT

ಚೆನ್ನೈ, ಮಾ. 11: ವಲಸಿಗರ ಮೇಲಿನ ದಾಳಿಯ ಕುರಿತು ವದಂತಿ ಹಬ್ಬಿದ ಬಳಿಕ ತಮಿಳುನಾಡಿಗೆ ಭೇಟಿ ನೀಡಿದ ಬಿಹಾರದ ಅಧಿಕಾರಿಗಳ ತಂಡವೊಂದು, ಘಟನೆಯ ವೀಡಿಯೊ ನಕಲಿ ಎಂದು ಶುಕ್ರವಾರ ಹೇಳಿದೆ. 

ಕಳೆದ ಎರಡು ವಾರಗಳಿಂದ ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ, ಮುಖ್ಯವಾಗಿ ಬಿಹಾರ್ ವಲಸೆ ಕಾರ್ಮಿಕರ ಮೇಲೆ ದಾಳಿ ಹಾಗೂ ಹತ್ಯೆ ಪ್ರಯತ್ನ ನಡೆಯುತ್ತಿದೆ ಎಂದು ಉದ್ದೇಶಪೂರ್ವಕವಾಗಿ ಬಿಂಬಿಸುವ ಹಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿತ್ತು.  

ಈ ಪ್ರತಿಪಾದನೆ ನಕಲಿ ಎಂದು ತಮಿಳುನಾಡು ಪೊಲೀಸರು,  ರಾಜ್ಯ ಸರಕಾರದ ಅಧಿಕಾರಿಗಳು ಹಾಗೂ ಸತ್ಯ ಶೋಧಕರು ಪ್ರತಿಪಾದಿಸಿದ್ದರು. ತಪ್ಪು ಮಾಹಿತಿಯನ್ನು ಹರಡಿರುವುದಕ್ಕೆ  ಸಂಬಂಧಿಸಿ  ಉತ್ತರಪ್ರದೇಶದ ಬಿಜೆಪಿ ವಕ್ತಾರ, ಸರಕಾರದ  ಪರ ವೆಬ್‌ಸೈಟ್ ಆಪ್ ಇಂಡಿಯಾ ಹಾಗೂ ಹಿಂದಿ ದಿನಪತ್ರಿಕೆ ‘ದೈನಿಕ್ ಭಾಸ್ಕರ್’ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 

ಈ ಹಿನ್ನೆಲೆಯಲ್ಲಿ ಘಟನೆಯ ಕುರಿತು ಪರಿಶೀಲನೆ ನಡೆಸಲು ಬಿಹಾರ್ ಸರಕಾರ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಬಾಲಮುರುಗನ್ ಡಿ. ಅವರ ನೇತೃತ್ವದಲ್ಲಿ ನಾಲ್ವರು ಸದಸ್ಯರ ತಂಡವನ್ನು ತಮಿಳುನಾಡಿಗೆ ಕಳುಹಿಸಿತ್ತು. 

ಈ ತಂಡ ತನ್ನ ವರದಿಯನ್ನು ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಲ್ಲಿಸಿದೆ. ವರದಿಯಲ್ಲಿ ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಯಾವುದೇ ರೀತಿಯ ದಾಳಿ ನಡೆದಿಲ್ಲ ಎಂದು ಪ್ರತಿಪಾದಿಸಿದೆ.  

ಈಗ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆದ ವೀಡಿಯೊಗಳು ನಕಲಿ ಎಂಬುದು ಜನರಿಗೆ ಅರಿವಾಗಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಕಲಿ ವೀಡಿಯೊ ಪ್ರಸಾರವಾದ ಬಳಿಕ ತಮಿಳುನಾಡು ಸರಕಾರ ಕೈಗೊಂಡ ಕ್ರಮದ ಬಗ್ಗೆ ನಾವು ತೃಪ್ತರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ. 

Similar News