×
Ad

ಮಹಾರಾಷ್ಟ್ರದಲ್ಲಿ ದಿನಂಪ್ರತಿ 8 ರೈತರು ಆತ್ಮಹತ್ಯೆ: ಎನ್‌ಸಿಪಿ

Update: 2023-03-11 23:02 IST

ಮುಂಬೈ, ಮಾ. 10: ಮಹಾರಾಷ್ಟ್ರದಲ್ಲಿ ಪ್ರತಿ ದಿನ ಸುಮಾರು 8 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಏಕನಾಥ್ ಶಿಂದೆ ಅವರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸುಮಾರು 1,203 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ 

ಮಾರ್ಚ್ 10ರಂದು ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಮಾತನಾಡಿದ ಸಂದರ್ಭ ಎನ್‌ಸಿಪಿ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಅಜಿತ್ ಪವಾರ್ ಅವರು ನೀಡಿದ ಮಾಹಿತಿಯನ್ನು ಉಲ್ಲೇಖಿಸಿ ದಿನಪತ್ರಿಕೆಯೊಂದು ಈ ವಿಚಾರ ತಿಳಿಸಿದೆ.  

‘‘ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಿಂದಾಗಿ ಕೃಷಿ ಅಪಾಯದಲ್ಲಿದೆ. ಕೃಷ್ಯುತ್ಪನ್ನಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರ ಪರಿಣಾಮ ರೈತರು ತಮ್ಮ ಕೃಷ್ಯುತ್ಪನ್ನಗಳನ್ನು ರಸ್ತೆಗೆ ಎಸೆಯುತ್ತಿದ್ದಾರೆ. ಕೃಷಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ. ರಸಗೊಬ್ಬರದ ಬೆಲೆ ಏರಿಕೆಯಾಗುತ್ತಿದೆ’’ ಎಂದು ಪವಾರ್ ತಿಳಿಸಿದ್ದಾರೆ. 
‘‘ಕೃಷಿಯ ವಿಷಯದಲ್ಲಿ ಶಿಂದೆ-ಫಡ್ನಾವಿಸ್ ಸರಕಾರ ತುಂಬಾ ಅಸೂಕ್ಷ್ಮ ಸರಕಾರಗಳಲ್ಲಿ ಒಂದು’’ ಎಂದು ಅವರು ಹೇಳಿದ್ದಾರೆ. 

ಪ್ರಸಕ್ತ ಆಡಳಿತದ ಕಳೆದ 7 ತಿಂಗಳಲ್ಲಿ 1,203 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇದಕ್ಕೆ ಹೋಲಿಸಿದರೆ ಈ ಹಿಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ (ಎಂವಿಎ) ಸರಕಾರದ ಅವಧಿಯಲ್ಲಿ 1,660 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. 
ಮಹಾ ವಿಕಾಸ ಅಘಾಡಿ ಸರಕಾರಕ್ಕಿಂತ ಮುನ್ನ ರಾಜ್ಯದಲ್ಲಿ ಬಿಜೆಪಿ ಆಡಳಿತವಿತ್ತು. 2014 ಹಾಗೂ 2019ರ ನಡುವೆ ದೇವೇಂದ್ರ ಫಡ್ನಾವಿಸ್ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ 5,061 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅದು ತಿಳಿಸಿದೆ. 

‘‘ಮಹಾರಾಷ್ಟ್ರ ವಲಯದಲ್ಲಿ ಕಳೆದ ಎರಡು ತಿಂಗಳಲ್ಲಿ 62 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇದೇ ಅವಧಿಯಲ್ಲಿ ಬೀಡ್ ಜಿಲ್ಲೆಯಲ್ಲಿ 22 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ’’ ಎಂದು ಪವಾರ್ ಅವರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Similar News