ಅಬಕಾರಿ ನೀತಿ ಹಗರಣ: ಈ.ಡಿ.ಯಿಂದ ಗಂಟೆಗಳ ಕಾಲ ತೆಲಂಗಾಣ ಸಿಎಂ ಪುತ್ರಿ ಕವಿತಾ ವಿಚಾರಣೆ
ಮಾ. 16ರಂದು ಮತ್ತೆ ಹಾಜರಾಗುವಂತೆ ಸಮನ್ಸ್
ಹೊಸದಿಲ್ಲಿ, ಮಾ. 11: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಬಿಆರ್‌ಎಸ್ ಎಂಎಲ್‌ಸಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಅವರ ಪುತ್ರಿ ಕೆ. ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಶನಿವಾರ 9 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಅಲ್ಲದೆ, ಮಾರ್ಚ್ 16ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತು.
ಕೆ. ಕವಿತಾ ಅವರು ವಿಚಾರಣೆಗೆ ಪೂರ್ವಾಹ್ನ 11 ಗಂಟೆಗೆ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾದರು. ರಾತ್ರಿ ಸುಮಾರು 8 ಗಂಟೆಗೆ ನಿರ್ಗಮಿಸಿದರು.
ದಕ್ಷಿಣ ಭಾರತದ ಮಧ್ಯ ಲಾಬಿಯ ಸದಸ್ಯ ಎಂದು ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕವಿತಾ ಅವರಿಗೆ ನಂಟು ಕಲ್ಪಿಸಲಾಗಿದೆ. ಈ ಹಿಂದೆ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು. ದಿಲ್ಲಿಯ ಮಾಜಿ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಿದ ಬಳಿಕ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಕವಿತಾ ಅವರಿಗೆ ಸಮನ್ಸ್ ನೀಡಿತ್ತು.
ಈ ಪ್ರಕರಣದಲ್ಲಿ ಬಂಧಿತರಾದವರನ್ನು ಮುಖಾಮುಖಿಯಾಗಲು ಕವಿತಾ ಅವರಿಗೆ ಸಮನ್ಸ್ ನೀಡಲಾಗಿತ್ತು ಎಂದು ವರದಿ ಹೇಳಿದೆ. ಕವಿತಾ ಅವರು ಮಹಿಳಾ ಮೀಸಲಾತಿ ವಿಧೇಯಕ ಅಂಗೀಕರಿಸುವಂತೆ ಆಗ್ರಹಿಸಿ ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಅವರು ತುಘ್ಲಕ್ ರಸ್ತೆಯಲ್ಲಿರುವ ತಂದೆಯ ಅಧಿಕೃತ ನಿವಾಸದಿಂದ ಶನಿವಾರ ನೇರವಾಗಿ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದರು.
ಜಾರಿ ನಿರ್ದೇಶನಾಲಯದ ಪ್ರಕಾರ ದಕ್ಷಿಣ ಭಾರತದ ಲಾಬಿಯಲ್ಲಿ ಕವಿತಾ ಅವರಲ್ಲದೆ, ಶರತ್ ರೆಡ್ಡಿ (ಅರಬಿಂದೊ ಫಾರ್ಮಾ ಪ್ರವರ್ತಕ), ಮಾಗುಂಟ ಶ್ರೀನಿವಾಸುಲು ರೆಡ್ಡಿ (ಆಂಧ್ರಪ್ರದೇಶದ ಓಂಗಾಲೆ ಲೋಕಸಭಾ ಕ್ಷೇತ್ರದ ವೈಎಸ್‌ಆರ್ ಕಾಂಗ್ರೆಸ್ ಸಂಸದ), ಅವರ ಪುತ್ರ ರಾಘವ ಮಾಗುಂಟ, ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಇದ್ದಾರೆ ಹಾಗೂ ಎಎಪಿ ಸರಕಾರಕ್ಕೆ ದೊಡ್ಡ ಮೊತ್ತದ ಲಂಚ ನೀಡಿದ್ದಾರೆ